ಬೆಂಗಳೂರು:ಮೃತ ಹೆಡ್ ಕಾನ್ಸ್ಟೇಬಲ್ಯೊಬ್ಬರ ಗುರುತಿನ ಚೀಟಿ ಬಳಸಿಕೊಂಡು ಸಂಚಾರ ಪೊಲೀಸರ ಸೋಗಿನಲ್ಲಿ ಸಂದೇಶ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದ ಕೋಲ್ಕತ್ತಾ ಮೂಲದ ಮೂವರು ವಂಚಕರನ್ನು ನಗರದ ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಮತ್ತು ಸುಭಿರ್ ಮಲ್ಲಿಕ್ ಎಂಬುವವರೇ ಬಂಧಿತರು. ಆರೋಪಿಗಳಿಂದ ಮೂರು ಮೊಬೈಲ್‌ಗಳು, ಬ್ಯಾಂಕ್ ಖಾತೆಗಳ ಜಪ್ತಿ ಮಾಡಲಾಗಿದೆ. ರಂಜನ್ ಕೋಲ್ಕತ್ತಾದಲ್ಲಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಕೆಲಸ ಬಿಟ್ಟಿದ್ದಾನೆ. ಇಸ್ಮಾಯಿಲ್ ಅಲಿ ಸೈಬರ್ ಕೆಫೆ ನಡೆಸುತ್ತಿದ್ದು, ರೈಲು, ಬಸ್, ವಿಮಾನ ಟೆಕೆಟ್ ಬುಕ್ ಮಾಡುತ್ತಿದ್ದ. ಸುಭಿರ್ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ. ಆದರೆ, ಮೃತ ಹೆಡ್ ಕಾನ್‌ಸ್ಟೇಬಲ್ ಭಕ್ತರಾಮ್ ಎಂಬುವರ ಗುರುತಿನ ಚೀಟಿ ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿ ಭಕ್ತರಾಮ್, 2020ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮಾಧ್ಯಮಗಳು ಆತನ ಗುರುತಿನ ಚೀಟಿ ಬಳಸಿ ಸುದ್ದಿ ಪ್ರಕಟಿಸಿದ್ದವು. ಈ ಮಧ್ಯೆೆ ರಂಜನ್ ಕುಮಾರ್, ಪೊಲೀಸರ ಹೆಸರಿನಲ್ಲಿ ವಂಚನೆಗೆ ಬಗ್ಗೆೆ ತಿಳಿದುಕೊಂಡಿದ್ದ. ಹೀಗಾಗಿ ಗೂಗಲ್‌ನಲ್ಲಿ ಬೆಂಗಳೂರು ಪೊಲೀಸ್ ಐಡಿ ಎಂದು ಶೋಧಿಸಿದಾಗ, ಮೃತ ಭಕ್ತರಾಮ್ ಗುರುತಿನ ಚೀಟಿ ಸಿಕ್ಕಿತ್ತು. ಆಗ ಆತನ ಫೋಟೋ ಬಳಸಿದ್ದ. ಆದರೆ, ಹೆಸರನ್ನು ಕುಮಾರಸ್ವಾಮಿ ಎಂದು ಬದಲಾಯಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.