ದಾವಣಗೆರೆ: ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಕಚೇರಿಗೆ ಮಾರ್ಚ್ 18ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಮನೂರು ಶಿವಶಂಕರಪ್ಪನವರ ಆಪ್ತ ಸಹಾಯಕರು ನಗರದ ಬಡಾವಣೆ ಠಾಣೆಯಲ್ಲಿ ಬೆದರಿಕೆ ಪತ್ರದ ಕುರಿತು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪತ್ರದ ಮೂಲಕ ವೈಯಕ್ತಿಕವಾಗಿ ಮಾನಹಾನಿ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಕುರಿತಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ವಿವರ: ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಶಾಮನೂರು ಶಿವಶಂಕರಪ್ಪನವರ ನಿವಾಸದ ಕಚೇರಿಗೆ ದಿನನಿತ್ಯ ಬರುವ ಪತ್ರಗಳನ್ನು ಪರಿಶೀಲನೆ ನಡೆಸುವ ವೇಳೆ ಮಾ.18ರಂದು ಸಿಎಂ ಹಾಗೂ ಡಿಸಿಎಂ ಬಗ್ಗೆ ವೈಯಕ್ತಿಕ ಮಾನಹಾನಿ ಮಾಡುವ ಕೆಟ್ಟ ಶಬ್ದಗಳನ್ನು ಬಳಸಿ ಪ್ರಾಣ ಬೆದರಿಕೆ ಹಾಕಿರುವ ಪತ್ರ ದೊರೆತಿದೆ. ಈ ವಿಚಾರವನ್ನು ಶಾಸಕರು ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಅವರ ಗಮನಕ್ಕೆ ತಂದಿದ್ದಾರೆ. ಆ ಬಳಿಕ ಎಸ್ಪಿ ಅವರ ಸಲಹೆಯಂತೆ ದೂರು ನೀಡಲಾಗಿದೆ. ಪತ್ರದಲ್ಲಿ ವೈಯಕ್ತಿಕ ಚಾರಿತ್ರಕ್ಕೆ ಧಕ್ಕೆ ಬರುವ ರೀತಿ ಪದಗಳನ್ನು ಬಳಸಲಾಗಿದೆ. ಅಲ್ಲದೇ ಬೆದರಿಕೆ ಸಹ ಹಾಕಲಾಗಿದೆ. ಈ ಪತ್ರ ಬರೆದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.