ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸತತವಾಗಿ ಎರಡು ವಾರಗಳಿಂದ ಮಳೆ ಸುರಿಯುತ್ತಿದೆ. ಒಂದು ಕಡೆ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನರಿಗೆ ರಿಲೀಫ್ ಸಿಕ್ಕಿದ್ರೆ, ಇನ್ನೊಂದೆಡೆ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಟ್ರಾಫಿಕ್ ಸಮಸ್ಯೆ, ರಸ್ತೆ ಗುಂಡಿಗಳಲ್ಲಿ ಬಿದ್ದು ದ್ವಿಚಕ್ರವಾಹನ ಸವಾರರು ಗಾಯಗೊಳ್ಳುತ್ತಿರುವುದು ದಿನ ನಿತ್ಯದ ಗೋಳಾಗಿ ಪರಿಣಮಿಸಿದೆ.
15 ದಿನಗಳ ಕಾಲ ಸುರಿದಿರುವ ಮಳೆಗೆ ಸುಮಾರು 5,500 ರಸ್ತೆ ಗುಂಡಿಗಳು ನಿರ್ಮಾಣವಾಗಿದೆ. ಇದರಿಂದ ನಗರದ ರಸ್ತೆಗಳ ಗುಣಮಟ್ಟ ಮತ್ತೊಂದು ಭಾರಿ ಬಯಲಾದಂತಾಗಿದೆ. ಈ ಹಿಂದೆ ಭಾರೀ ಪ್ರಮಾಣದಲ್ಲಿ ಸದ್ದು ಮಾಡಿದ್ದ ರಾಜಧಾನಿಯ ರಸ್ತೆ ಗುಂಡಿಗಳು 15 ದಿನದ ಮಳೆಗೆ ಮತ್ತೆ ತಲೆ ಎತ್ತಿದ್ದು, ವಾಹನ ಸವಾರರಿಗೆ ಕಂಟಕವಾಜಿ ಪರಿಣಮಿಸಿದೆ.
ರಸ್ತೆಯ ಮೇಲೆ ಚರಂಡಿ ನೀರು ಉಕ್ಕಿ ಹರಿಯುತ್ತಿರುವುದರಿಂದ ಚಿಕ್ಕಗಾತ್ರದ ಗುಂಡಿಗಳು ಈಗ ದೊಡ್ಡ ಗಾತ್ರದಲ್ಲಿ ಬಾಯೆರೆದಿದ್ದು, ವಾಹನ ಸವಾರರ ಓಡಾಟಕ್ಕೆ ಸಂಚಕಾರ ತಂದೊಡ್ಡಿವೆ. ಬೆಂಗಳೂರಿನ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲೂ ಗುಂಡಿಗಳು ಬಾಯಿತೆರೆದಿವೆ.
ಮುಖ್ಯವಾಗಿ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ದೊಡ್ಡ ಗಾತ್ರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಭಯದಿಂದಲೇ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸ ಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಹೊರಮಾವು-ಅಗರ ಮುಖ್ಯರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಕಾಣಿಸಿಕೊಂಡಿದ್ದು, ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ವಾರದ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಿತ್ತುಹೋದ ರಸ್ತೆಯಲ್ಲಿಯೇ ಜಲಮಂಡಳಿಯ ಕಾಮಗಾರಿಯೂ ನಡೆಯುತ್ತಿದೆ. ಈ ರಸ್ತೆಯಲ್ಲಿ ಪ್ರತಿ ಮಳೆ ಬಂದಾಗ ನೀರು ತುಂಬಿ ರಸ್ತೆ ಗುಂಡಿಗಳು ಕಾಣದೇ ವಾಹನಸವಾರರಿಗೆ ಅಪಾಯವನ್ನೊಡ್ಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ಸಮಸ್ಯೆಯನ್ನುಂಟು ಮಾಡಿದೆ.