ಬೆಂಗಳೂರು: ಪರಿಸರಸ್ನೇಹಿ ಹಾಗೂ ಭವಿಷ್ಯದಲ್ಲಿ ಬೇಡಿಕೆ ಉಂಟುಮಾಡುವ ಎಲೆಕ್ಟ್ರಿಕಲ್ ಬೈಕ್‌ಗಳದ್ದೇ ಜಮಾನವಾಗಲಿದೆ. ಮನೆಯ ಹತ್ತಿರವೇ ಹೋಗಬೇಕಾದರೂ ಇಂದು ಬಹುತೇಕರು ದ್ವಿಚಕ್ರ ವಾಹನ ಬಳಸುತ್ತಾರೆ. ಇದರಿಂದ ಇಂಧನ ಜೊತೆಗೆ ಮಾಲಿನ್ಯ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ. ಸುಸ್ಥಿರ ಪರಿಸರಕ್ಕಾಗಿ ಇಂಧನ ಖರ್ಚಿಲ್ಲದೆ ಬ್ಯಾಗ್ನಲ್ಲಿಯೂ ಹೊತ್ತೊಯ್ಯುವ ಇ-ಕಿಕ್ ಸ್ಕೂಟರ್ಸ್ ವಾಹನವನ್ನು ರ‍್ಯಾಡ್ ಬೋರ್ಡ್ಸ್ ಕಂಪೆನಿ ಪರಿಚಯಿಸಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಪರಿಸರಸ್ನೇಹಿಯುಳ್ಳ ಇ-ಕಿಕ್ ಸ್ಕೂಟರ್ ಅನ್ನು ನಗರದ ಅರಮನೆ ಮುಂಭಾಗದಲ್ಲಿ ಆರಂಭಗೊಂಡಿರುವ ಟೆಕ್ ಸಮ್ಮಿಟ್ನಲ್ಲಿ ಪ್ರದರ್ಶನಕ್ಕಿಟ್ಟಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಮೆಟ್ರೋ ರೈಲು, ಬಸ್‌ನಲ್ಲಿಯೂ ಈ ವಾಹನ ಹೊತ್ಯೊಯ್ಯಬಹುದು ಎನ್ನುವುದು ಇದರ ಪ್ಲಸ್ ಪಾಯಿಂಟ್.
"ದಿನೇ ದಿನೇ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ, ಸಂಚಾರ ದಟ್ಟಣೆ ಮಾತ್ರವಲ್ಲದೆ ಮಾಲಿನ್ಯವೂ ಅಧಿಕವಾಗುತ್ತಿದೆ. ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಪರಿಸ್ಥಿತಿ ಬಿಗಾಡಯಿಸುತ್ತಿದೆ. ಸಮೀಪದ ಅಂಗಡಿಗೆ ಹೋಗಬೇಕಾದರೂ ಇಂದಿನ ಯುವಸಮೂಹ ವಾಹನಗಳ ಮೇಲೆ ಅವಲಂಬಿಸುತ್ತಿರುವುದು ಹೆಚ್ಚಾಗುತ್ತಿದೆ. ಅವಲಂಬನೆ ತಗ್ಗಿಸುವ ಉದ್ದೇಶದಿಂದ ಇ-ಕಿಕ್ ಸ್ಕೂಟರ್ ವಾಹನವನ್ನು ಆವಿಷ್ಕರಿಸಲಾಗಿದೆ. ಬೆಂಗಳೂರು ಮುಂಬೈ, ದೆಹಲಿ ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಮಾರಾಟ ಮಾಡಲಾಗುತ್ತಿದೆ" ಎಂದು ಸಂಸ್ಥೆಯ ಸಂಸ್ಥಾಪಕ ಕಿರಣ್ ತಿಳಿಸಿದ್ದಾರೆ.