ಕರ್ನಾಟಕ

karnataka

ETV Bharat / state

ಮುಂದಿನ ವರ್ಷದಿಂದ ವಲಯವಾರು ಬಜೆಟ್‌ಗೆ ಚಿಂತನೆ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಬಜೆಟ್​ ಹಣ ಹೇಗೆ ಖರ್ಚಾಗುತ್ತದೆ ಎನ್ನುವುದನ್ನು ತಿಳಿಸುವ ಉದ್ದೇಶದಿಂದ ವಲಯವಾರು ಬಜೆಟ್​ ಮಂಡಿಸಲು ಚಿಂತಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

BBMP Chief Commissioner Tushar Girinath
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (ETV Bharat)

By ETV Bharat Karnataka Team

Published : 4 hours ago

Updated : 1 hours ago

ಬೆಂಗಳೂರು: "ಪ್ರತೀ ವರ್ಷದಂತೆ 2025ರ ವಾರ್ಷಿಕ ಬಜೆಟ್‌ಗೆ ಸಿದ್ಧತೆ ನಡೆಯುತ್ತಿದೆ. ಮುಂದಿನ ಬಜೆಟ್‌ಗಳನ್ನು ವಲಯವಾರು ಹಂಚಿಕೆ ಬಜೆಟ್‌ಗಳಾಗಿ ಸಿದ್ಧಪಡಿಸಲಾಗುವುದು" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಎಷ್ಟು ಹಣ ಖರ್ಚಾಗುತ್ತದೆ ಎಂದು ಈ ಹಿಂದಿನ ಬಜೆಟ್‌ಗಳಲ್ಲಿ ನಮೂದಿಸುತ್ತಿರಲಿಲ್ಲ. ಆದರೆ 2025ರ ವಾರ್ಷಿಕ ಬಜೆಟ್ ಅನ್ನು ವಲಯವಾರು ಬಜೆಟ್ ಆಗಿ ಮಂಡಿಸಲಾಗುತ್ತದೆ. ಈ ರೀತಿ ಬಜೆಟ್ ಮಂಡಿಸಿದರೆ, ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಬಜೆಟ್ ಹಣ ಹೇಗೆ ಖರ್ಚಾಗುತ್ತದೆ ಎಂಬುದು ತಿಳಿಯುತ್ತದೆ. ವಾರ್ಷಿಕ ಬಜೆಟ್ ಸಿದ್ಧತೆಗೆ ಇದು ಪ್ರಾರಂಭಿಕ ಹಂತವಾಗಿದ್ದು, ವಲಯವಾರು ಆದಾಯದ ಮೇಲೆ ಬಜೆಟ್‌ ಕೆಲಸ ನಡೆಯುತ್ತದೆ" ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (ETV Bharat)

"ಪಾಲಿಕೆ ವ್ಯಾಪ್ತಿಯಲ್ಲಿ ಹೈಡೆನ್ಸಿಟಿ ಕಾರಿಡಾರ್, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಮತ್ತು ವಲಯ ಮಟ್ಟದ ರಸ್ತೆಗಳು ಸೇರಿದಂತೆ ಸುಮಾರು 12878.78 ಕಿ.ಮೀ. ಉದ್ದ ರಸ್ತೆ ಜಾಲವಿದ್ದು, ಪ್ರತೀ ರಸ್ತೆಯನ್ನು ವೈಜ್ಞಾನಿಕ, ತಾಂತ್ರಿಕವಾಗಿ ಸದೃಢ ಮತ್ತು ದೀರ್ಘ ಬಾಳಿಕೆ ಬರುವಂತೆ ವಿನ್ಯಾಸಗೊಳಿಸುವುದು, ನಿರ್ಮಾಣ ಮಾಡುವುದು ಮತ್ತು ನಿರ್ವಹಣೆ ಮಾಡುವುದು ಪ್ರಸ್ತುತ ಅತ್ಯಗತ್ಯ" ಎಂದು ಹೇಳಿದರು.

ಜನವರಿಯಿಂದ ರಸ್ತೆಗುಂಡಿ ಮುಚ್ಚುವ ಕೆಲಸ: "ನಗರದಾದ್ಯಂತ ರಸ್ತೆಗುಂಡಿ ಮುಚ್ಚುವುದೂ ಸೇರಿ ಸದೃಢ ಮತ್ತು ದೀರ್ಘ ಬಾಳಿಕೆ ರಸ್ತೆ ನಿರ್ಮಾಣಕ್ಕಾಗಿ 700 ಕೋಟಿ ರೂಪಾಯಿಗಳ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಜನವರಿಯಿಂದ ರಸ್ತೆಗುಂಡಿ ಮುಚ್ಚುವ ಕೆಲಸ ನಡೆಯಲಿದೆ. ಟೆಂಡರ್ ಕೊಟ್ಟ 21 ದಿನಗಳಲ್ಲಿ ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು" ಎಂದರು.

"ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3,500 ಕೋಟಿ ರೂಪಾಯಿಗಿಂತ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಮುಂದಿನ ನಾಲ್ಕು ದಿನದೊಳಗಾಗಿ ಹೆಚ್ಚುವರಿ 500 ಕೋಟಿ ರೂ. ಹಣ ಸಂಗ್ರಹಿಸುವ ಗುರಿ ಇದೆ. ಮಾರ್ಚ್ ಅಂತ್ಯದೊಳಗಾಗಿ 5,200 ಕೋಟಿ ರೂಪಾಯಿಗಳ ತೆರಿಗೆ ಹಣ ಸಂಗ್ರಹಿಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಸಲುವಾಗಿ ಸೂಕ್ತ ಕ್ರಮಗಳನ್ನು ಕೈಗೊಂಡು, ಆಯಾ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ಕೂಡಲೇ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಹೇಳಿದರು.

ಆಸ್ತಿ ತೆರಿಗೆ ಬಾಕಿದಾರರಿಗೆ ಎಚ್ಚರಿಕೆ ಸಂದೇಶ: "ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟಿಎಸ್ ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದ್ದು, ಈ ಯೋಜನೆಯು ನವೆಂಬರ್​ವರೆಗೆ ಮಾತ್ರ ಜಾರಿಯಲ್ಲಿರಲಿದೆ. ಈ ಸಂಬಂಧ ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು ಕಾಲಮಿತಿಯ ಒಳಗಾಗಿ ಪಾವತಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್ 10ರಿಂದ ಪಾವತಿಸಬೇಕಿರುವ ಬಾಕಿ ಆಸ್ತಿ ತೆರಿಗೆ ದುಪ್ಪಟ್ಟಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ದೀಪಾವಳಿಗೆ ಸಿಹಿ ಸುದ್ದಿ ನೀಡಿದ ಪಾಲಿಕೆ: ನವೆಂಬರ್ 31ರವರೆಗೆ ಓಟಿಎಸ್ ವ್ಯವಸ್ಥೆ ಮರುಜಾರಿ

Last Updated : 1 hours ago

ABOUT THE AUTHOR

...view details