ಬೆಳಗಾವಿ:ಅಯೋಧ್ಯೆಯಲ್ಲಿ ಜ.22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಶ್ರೀರಾಮನ ಆರಾಧನೆ ಜೋರಾಗಿದೆ. ಜೊತೆಗೆ ಕರ್ನಾಟಕಕ್ಕೂ ರಾಮನಿಗೂ ಅವಿನಾಭಾವ ಸಂಬಂಧವಿದೆ. ಬೆಳಗಾವಿ ಜಿಲ್ಲೆಯಲ್ಲೂ ರಾಮನ ಹೆಜ್ಜೆ ಗುರುತುಗಳಿವೆ.
ರಾಮನಿಗಾಗಿ ಅನೇಕ ವರ್ಷಗಳ ಕಾಲ ಜಾತಕ ಪಕ್ಷಿಯಂತೆ ಕಾಯ್ದಿದ್ದ ಶಬರಿಗೆ ಕೊನೆಗೂ ಶ್ರೀರಾಮ ದರ್ಶನ ಕೊಟ್ಟಿದ್ದನು. ಜೊತೆಗೆ ಶಬರಿ ಭಕ್ತಿಗೆ ಮೆಚ್ಚಿ ವರ ಕೊಟ್ಟಿರೋ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನಲೆಯುಳ್ಳ ಕ್ಷೇತ್ರ ಬೆಳಗಾವಿ ಜಿಲ್ಲೆಯಲ್ಲಿದೆ. ರಾಮ ಬಂದು ಹೋಗಿದ್ದರ ಬಗ್ಗೆ ಅನೇಕ ಕುರುಹುಗಳು ಇಂದಿಗೂ ಜೀವಂತವಾಗಿವೆ. ಅದುವೇ ರಾಮದುರ್ಗ ತಾಲೂಕಿನ ಸುರೇಬಾನ ಬಳಿ ಇರುವ ಶಬರಿಕೊಳ್ಳ. ಶಬರಿ ತಪಸ್ಸು ಮಾಡಿದ್ದ ಶಬರಿ ಆಶ್ರಮ ಸುರೇಬಾನ ಗ್ರಾಮದಿಂದ ಕೇವಲ ಮೂರು ಕಿಲೋ ಮೀಟರ್ ಅಂತರದಲ್ಲಿದೆ. ಇಲ್ಲಿ ಶಬರಿ ದೇವಾಲಯ, ರಾಮನ ದೇವಾಲಯ, ಶಬರಿ ತಪಸ್ಸು ಮಾಡಿದ್ದ ಸ್ಥಳ, ಎರಡು ಸಿಹಿ ನೀರಿನ ಪುಷ್ಕರಣಿಗಳು, ಬಾರೆ ಗಿಡ, ಬೆಟ್ಟದ ರಮಣೀಯ ಪ್ರದೇಶ ಇಲ್ಲಿದೆ.
ಯಾರಿದು ಶಬರಿ?:ಶಬರಿಯೂ ಈಗಿನ ಮಧ್ಯಪ್ರದೇಶದ ಶಬರ ಮಹಾರಾಜನ ಏಕಮಾತ್ರ ಸೌಂದರ್ಯವತಿ ಮಗಳು. ಶಬರಿಯ ಮದುವೆಯ ಸ್ವಯಂವರ ನಡೆಸಲು ತಂದೆ ಶಬರ ಮಹಾರಾಜ ನಿಶ್ಚಯಿಸಿದ್ದರು. ಅಷ್ಟೂ ದಿಕ್ಕುಗಳಿಂದ ಬೇಟೆಯಾಡಿದ ಪ್ರಾಣಿಗಳ ತಲೆಗಳನ್ನು ಕತ್ತರಿಸಿ ತಂದು ಮಂಟಪಕ್ಕೆ ಶೃಂಗರಿಸಲಾಗಿರುತ್ತದೆ. ಇದರಿಂದ ದುಃಖಿತಳಾದ ಶಬರಿಯು ತನ್ನ ಸ್ವಯಂವರಕ್ಕಾಗಿ ಇಷ್ಟೊಂದು ಪ್ರಾಣಿಗಳ ಜೀವ ತೆಗೆಯುವುದನ್ನು ನೋಡಲಾಗದೆ ಜೀವನದಲ್ಲಿ ಹಿಂಸೆಗಿಂತ ಅಹಿಂಸಾ ಮಾರ್ಗ ಒಳ್ಳೆಯದು ಎಂದು ಶಬರಿಗೆ ವೈರಾಗ್ಯ ಬರುತ್ತದೆ. ಸುಖ, ಸಂಪತ್ತು, ರಾಜ ವೈಭವವನ್ನು ತೊರೆದು ಶಬರಿ ದೇಶ ಸಂಚಾರಕ್ಕಾಗಿ ಮುಂದಾಗುತ್ತಾರೆ. ಅಲ್ಲಿಂದ ಸುರೇಬಾನ್ ಪಕ್ಕದ ಅರಣ್ಯದಲ್ಲಿ ಬಂದು ನೆಲೆಸುತ್ತಾರೆ ಎಂದು ಗ್ರಾಮದ ಹಿರಿಯ ಈರಣ್ಣ ಇಟಗಿ ಈಟಿವಿ ಭಾರತಕ್ಕೆ ತಿಳಿಸಿದರು.
ಶಬರಿ ಕಚ್ಚಿಟ್ಟಿದ್ದ ಬಾರೆ ಹಣ್ಣು ತಿಂದಿದ್ದ ಶ್ರೀರಾಮ:ಹೀಗೆ ಬಂದ ಶಬರಿಯು ಇಲ್ಲಿ ಮಾತಂಗ ಮುನಿಗಳ ಸೇವೆ ಮಾಡುತ್ತಿರುವಾಗ ಒಂದು ದಿನ ನಾನು ಇಲ್ಲಿಂದ ಬೇರೆ ಕಡೆ ತೆರಳಬೇಕಿದ್ದು, ಪ್ರಭು ಶ್ರೀರಾಮನು ಬರೋವರೆಗೂ ನೀನು ಇಲ್ಲಿಯೇ ಇರು, ಶ್ರೀರಾಮ ಬಂದು ನಿನಗೆ ಸದ್ಗತಿ ಕರುಣಿಸುತ್ತಾನೆ ಎಂದು ಮಾತಂಗ ಮುನಿಗಳು ತಿಳಿಸುತ್ತಾರೆ. ಅಂತಿಮವಾಗಿ ಶಬರಿಯನ್ನು ಭೇಟಿಯಾಗಲು ಲಕ್ಷ್ಮಣನ ಜೊತೆಗೆ ಶ್ರೀರಾಮನು ಆಗಮಿಸುತ್ತಾನೆ. ಆಗ ತುಂಬಾ ಸಂತೋಷಗೊಂಡ ಶಬರಿ ರಾಮನಿಗೆ ತಾನು ತಿಂದು ತೆಗೆದಿಟ್ಟಿದ್ದ ಸಿಹಿಯಾದ "ಬಾರಿ ಹಣ್ಣುಗಳ"ನ್ನು ಕೊಡುತ್ತಾಳೆ. ಶಬರಿ ಕೊಟ್ಟ ಹಣ್ಣುಗಳನ್ನು ರಾಮನು ಪ್ರೀತಿಯಿಂದ ಸೇವಿಸುತ್ತಾನೆ. ಶಬರಿಯ ಭಕ್ತಿಗೆ ಮೆಚ್ಚಿದ ಶ್ರೀರಾಮ ನಿನಗೆ ಏನು ವರ ಬೇಕು ಕೇಳು ಎಂದು ಶಬರಿಗೆ ಕೇಳುತ್ತಾನೆ. ಆಗ ಶಬರಿ ನಿನ್ನ ತೊಡೆಯ ಮೇಲೆ ಪ್ರಾಣ ಬಿಡುವ ಅವಕಾಶ ಕೊಡು ಎಂದು ರಾಮನ ಬಳಿ ಕೇಳಿಕೊಳ್ಳುತ್ತಾಳೆ.
ಶಬರಿ ರಾಮನ ತೊಡೆಯ ಮೇಲೆ ಮಲಗಿದ್ದ ವೇಳೆ ರಾಮನು ಸುತ್ತಲೂ ನೀರನ್ನು ಹುಡುಕಿದಾಗ ಎಲ್ಲೂ ನೀರು ಸಿಗುವುದಿಲ್ಲ. ಆಗ ರಾಮ ಬಾಣ ಪ್ರಯೋಗ ಮಾಡಿ ನೀರು ಚಿಮ್ಮಿಸುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಇಂದಿಗೂ ಎರಡು ಹೊಂಡಗಳಿದ್ದು, ಇಲ್ಲಿ ಇವತ್ತಿಗೂ ನೀರು ಬತ್ತಿಲ್ಲ. ಇಲ್ಲಿನ ಸಿಹಿ ನೀರನ್ನು ಸುರೇಬಾನ ಗ್ರಾಮದ ಜನ ಕುಡಿಯಲು ಇಂದಿಗೂ ಮನೆಗೆ ಒಯ್ಯುತ್ತಾರೆ. ಅಲ್ಲದೇ ಈ ನೀರು ಸಿಹಿ ಜೊತೆಗೆ ಔಷಧಿ ಗುಣವನ್ನು ಹೊಂದಿದೆ. ವಿವಿಧ ಚರ್ಮ ರೋಗದಿಂದ ಬಳಲುವ ಅದೇಷ್ಟೋ ಜನರು ಈ ನೀರು ಬಳಸಿದ ಬಳಿಕ ಗುಣಮುಖರಾಗಿದ್ದಾರೆ ಎನ್ನುತ್ತಾರೆ ದೇವಸ್ಥಾನ ಅರ್ಚಕ ಬಸಪ್ಪ ಮದಕಟ್ಟಿ.