ಗಂಗಾವತಿ:ಜಾತ್ರೆಗೆಂದು ನಗರಕ್ಕೆ ಬಂದಿದ್ದ ಸಾರ್ವಜನಿಕರ ಜೇಬಿಗೆ ಖದೀಮರು ಕತ್ತರಿ ಹಾಕಿದ್ದಾರೆ. ನಗದು, ಚಿನ್ನದ ಸರ ಸೇರಿದಂತೆ ಲಕ್ಷಾಂತರ ಮೊತ್ತದ ಬೆಲೆಬಾಳುವ ವಸ್ತುಗಳು ಕಳುವಾಗಿವೆ. ನಗರದ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ಹಾಗೂ ತಾತ ಜಾತ್ರೆಯಲ್ಲಿ ಘಟನೆ ನಡೆದಿದೆ.
ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ರಥೋತ್ಸವದ ಸಂದರ್ಭದಲ್ಲಿ ಉಂಟಾದ ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಎರಡರಿಂದ ಮೂವರಿದ್ದ ಕಳ್ಳರ ತಂಡ ಜನರಿಂದ ಜೇಬಿನಿಂದ ಹಣ ಕಳ್ಳತನ ಮಾಡಿದೆ. ಮಹಿಳೆಯರ ಕತ್ತಿಗೆ ಕೈ ಹಾಕಿ ಚಿನ್ನದ ಸರ ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ವೆಂಕಟೇಶ ಎಂಬ ರೈತರೊಬ್ಬರ ಜೇಬಿಗೆ ಕೈ ಹಾಕಿದ ಖದೀಮರು 20 ಸಾವಿರ ನಗದು ಹಣ ದೋಚಿದ್ದಾರೆ. ಹೆರಿಗೆಗೆಂದು ವಿದ್ಯಾನಗರಕ್ಕೆ ಬಂದಿದ್ದ ಪತ್ನಿಗೆ ಚಿನ್ನದ ಸರ ಮಾಡಿಸುವ ಉದ್ದೇಶಕ್ಕೆ ವೆಂಕಟೇಶ ಹಣ ತಂದಿದ್ದರು.