ಆನೇಕಲ್:ಗ್ಯಾಂಗ್ ಕಟ್ಟಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕನ್ನ ಹಾಕಿ ಪರಾರಿಯಾಗುತ್ತಿದ್ದ ಕತರ್ನಾಕ್ ಕಳ್ಳರು ಇವರು. ಪೊಲೀಸರ ಗುಂಡೇಟು ತಿಂದರೂ ಕೂಡ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುವುದನ್ನು ಈ ಖದೀಮರು ಬಿಟ್ಟಿರಲಿಲ್ಲ. ಭಾರಿ ತಲೆ ನೋವಾಗಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಈ ಆಸಾಮಿಗಳು ಹಿಂದೆ ಮನೆ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಗುಂಡೇಟು ತಿಂದು ಜೈಲು ಸೇರಿ ಹೊರ ಬಂದ ಖತರ್ನಾಕ್ ಆರೋಪಿ ನವೀನ್ ಈ ತಂಡದಲ್ಲಿದ್ದನು. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ಮನೆ ಕಳ್ಳತನ ಹಾಗೂ ಬೈಕ್ಗಳ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಈ ಪ್ರಕರಣವನ್ನು ಭೇದಿಸಲು ಹೆಬ್ಬಗೋಡಿ ಪೊಲೀಸ್ ಠಾಣೆಯ ಕ್ರೈಂ ತಂಡವನ್ನು ರಚನೆ ಮಾಡಿ ಆನೇಕಲ್ ಬೊಮ್ಮಸಂದ್ರದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಚಿನ್ನ ದೋಚಿದ್ದ ಮಂಜುನಾಥ್ ಅಲಿಯಾಸ್ ಮಂಜ, ಎಭಿನೈಜರ್ ಅಲಿಯಾಸ್ ಮದನ್, ಅಜಿತ್ ಅಲಿಯಾಸ್ ಮುರುಗನ್ ಹಾಗೂ ನವೀನ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.