ನದಿಯಲ್ಲಿ ಮೃತದೇಹ ಹೊತ್ತು ಶವಸಂಸ್ಕಾರ ಮಾಡಿದ ಗ್ರಾಮಸ್ಥರು (ETV Bharat) ದಾವಣಗೆರೆ: ತುಂಗಭದ್ರಾ ನದಿ ನೀರಿನಲ್ಲೇ ಮೃತದೇಹ ಹೊತ್ತು ಸಾಗಿ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಿರುವ ಘಟನೆ ಜಿಲ್ಲೆಯ ಹರಿಹರದ ಗುತ್ತೂರು ಗ್ರಾಮದಲ್ಲಿ ಗುರುವಾರ ನಡೆಯಿತು.
ಗುತ್ತೂರು ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಶವಸಂಸ್ಕಾರಕ್ಕೂ ಸ್ಥಳವಿಲ್ಲದ ಪರಿಸ್ಥಿತಿ ಇದೆ. ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಗ್ರಾಮದ ಸ್ಮಶಾನ ಜಲಾವೃತವಾಗಿದೆ. ಇದರ ನಡುವೆ, ಗ್ರಾಮಸ್ಥರು ನೀರಿನಲ್ಲೇ ಶವ ಹೊತ್ತು ಸಾಗಿ ಹರಸಾಹಸಪಟ್ಟು ಶವಸಂಸ್ಕಾರ ಮಾಡಿದರು.
ಗುತ್ತೂರು ಗ್ರಾಮದ ಎಚ್.ಎಂ.ಸಿ.ಮಂಜಪ್ಪ (70) ಎಂಬವರು ಗುರುವಾರ ಅಕಾಲಿಕವಾಗಿ ಸಾವನ್ನಪ್ಪಿದ್ದರು. ನದಿ ದಡದಲ್ಲೇ ಸ್ಮಶಾನವಿದೆ. ಆದರೆ ನದಿ ನೀರು ಇಡೀ ಸ್ಮಶಾನವನ್ನು ಆವರಿಸಿಕೊಂಡಿದೆ.
ಹರಿಹರ ನಗರಸಭೆ ವ್ಯಾಪ್ತಿಯ ಗುತ್ತೂರು ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಸ್ಮಶಾನಕ್ಕೆ ಸರಿಯಾದ ಜಾಗವಿಲ್ಲ. ಜನರ ಬೇಡಿಕೆಗೆ ಹರಿಹರ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಹಾಗಾಗಿ, ಮಳೆಗಾಲದಲ್ಲಿ ಈ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯಸಂಸ್ಕಾರ ಮಾಡುವುದು ಜನರಿಗೆ ದೊಡ್ಡ ತಲೆನೋವು. ಗುರುವಾರ ಜಲಾವೃತವಾದ ಸ್ಮಶಾನದಲ್ಲೇ ತೆರಳಿ ಅಂತ್ಯಸಂಸ್ಕಾರ ಮಾಡುವ ಮೂಲಕ ಗುತ್ತೂರು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:ಕಾಡಿನಲ್ಲಿ ಕೊಳೆತು ಹೋಗುತ್ತಿದ್ದ ಸೌಮ್ಯಳ ಮೃತದೇಹ 'ನಾಪತ್ತೆ ಪ್ರಕರಣ'ದಿಂದ ಪತ್ತೆ! ಕೊನೆಗೂ ಹೊರಬಿತ್ತು ಮರ್ಡರ್ ಮಿಸ್ಟ್ರಿ - Shivamogga Girl Murder Case