ಚಿತ್ರದುರ್ಗ/ಕೋಲಾರ:ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಭರ್ಜರಿ ಮತದಾನ ಸಾಗುತ್ತಿದೆ. ಅನೇಕರು ತಮ್ಮ ಕುಟುಂಬ ಸಮೇತರಾಗಿ ಆಯಾ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಆದ್ರೆ ಚಿತ್ರದುರ್ಗದ ಮ್ಯಾಕ್ಲುರಹಳ್ಳಿ ಮತ್ತು ಕೋಲಾರದ ಬೆಗ್ಲಿಬೆಣಜೇನಹಳ್ಳಿಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ.
ಕುಡಿಯುವ ನೀರಿಗಾಗಿ ಮತದಾನ ಬಹಿಷ್ಕಾರ:ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮ್ಯಾಕ್ಲುರಹಳ್ಳಿಯಲ್ಲಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮ್ಯಾಕ್ಲೂರಹಳ್ಳಿಯ ಎ.ಕೆ ಕಾಲೋನಿ, ಬೋವಿಹಟ್ಟಿಯಲ್ಲಿ ಗ್ರಾಮಸ್ಥರು ಧರಣಿ ಕುಳಿತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಯುವವರೆಗೆ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದೇವೆ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ. ಮ್ಯಾಕ್ಲೂರಹಳ್ಳಿಯ ಮತಗಟ್ಟೆ ಸಂಖ್ಯೆ 122ರಲ್ಲಿ ಮತ ಚಲಾಯಿಸದೆ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡಿದ್ದಾರೆ.
ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರ:ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಗೊಲ್ಲಹಳ್ಳಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿಲ್ಲ. ಸಮುದಾಯ ಭವನವಿಲ್ಲ, ಕಂದಾಯ ಇಲಾಖೆ ಸಾಗುವಳಿ ಚೀಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಇಂದು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ 380 ಮತಗಳಿದ್ದು, ಇಡೀ ಗ್ರಾಮಸ್ಥರು ಒಕ್ಕೊರಲಿನಿಂದ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಸಮಸ್ಯೆಗಳು ಬಗೆಹರಿಸುವವರೆಗೂ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಮತದಾನ ಬಹಿಷ್ಕಾರ ಮಾಡುವುದಾಗಿ ಬ್ಯಾನರ್ ಹಾಕಿದ್ದು, ಮತಗಟ್ಟೆಗೆ ತೆರಳದೆ ಬೀದಿಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಮತಗಟ್ಟೆ ಬಳಿ ಮಹಿಳೆಗೆ ಹೃದಯ ಸ್ತಂಭನ, ಮತದಾನಕ್ಕೆ ಬಂದ ವೈದ್ಯ ಉಳಿಸಿದ್ರು ಪ್ರಾಣ - CARDIAC ARREST