ಸದನದಲ್ಲಿ ಪ್ರತಿಪಕ್ಷಗಳ ಧರಣಿ ಬೆಂಗಳೂರು : ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ನಿರ್ಣಯವನ್ನು ವಿರೋಧಿಸಿ ಪ್ರತಿಪಕ್ಷಗಳು ಇಂದು ಧರಣಿ ನಡೆಸಿ ಗದ್ದಲ ಎಬ್ಬಿಸಿದವು. ಹೀಗಾಗಿ ಸ್ಪೀಕರ್ ಯು.ಟಿ.ಖಾದರ್ ಕೆಲ ಹೊತ್ತು ಸದನವನ್ನು ಮುಂದೂಡಿದ್ದರು.
ಸದನ ಇಂದು ಬೆಳಗ್ಗೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಮುಂದೆ ಬಾವಿಗಿಳಿದು ಧರಣಿ ಆರಂಭಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಪ್ರೇರಿತ ನಿರ್ಣಯ ಮಂಡಿಸುವ ಮೂಲಕ ಮತೊಮ್ಮೆ ಸದನದ ಪಾವಿತ್ರ್ಯತೆಗೆ ಅಪಚಾರ ಮಾಡಲಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸದನ ನಡೆಯುವ ಕುರಿತು ಸಭೆ ನಡೆಯುವಾಗ ಮಸೂದೆ, ಚರ್ಚೆಗಳ ಬಗ್ಗೆ ಹೇಳಲಾಗುತ್ತದೆ. ಆದರೆ, ಏಕಾಏಕಿ ಕದ್ದು ಮುಚ್ಚಿ ಕೇಂದ್ರ ಸರ್ಕಾರವನ್ನು ಅವಹೇಳನ ಮಾಡುವ, ತೆಗಳುವ ಕೆಲಸ ಮಾಡಲಾಗಿದೆ. ಒಂದೇ ಬಾರಿಗೆ ನಿರ್ಣಯ ತರುವುದು ಉತ್ತಮ ಸಂಪ್ರದಾಯವಲ್ಲ. ಸ್ಪೀಕರ್ ಕೂಡ ಇದನ್ನು ನಮ್ಮ ಗಮನಕ್ಕೆ ತಂದಿಲ್ಲ. ನಾವು ಬಡ ಜನರಿಗಾಗಿ ಚರ್ಚೆ ನಡೆಯಲಿ ಎಂದು ಸದನ ನಡೆಯಲು ಸಹಕಾರ ನೀಡಿದ್ದೇವೆ. ಈ ರೀತಿ ಮೋಸ ಮಾಡಿ ನಿರ್ಣಯ ತರಬಾರದಿತ್ತು, ರಾಜಾರೋಷವಾಗಿಯೇ ತರಬೇಕಿತ್ತು. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಸದನದ ಹೊರಗೆ ಮಾತನಾಡಬಹುದು. ಆದರೆ, ಸದನಲ್ಲಿ ನಿರ್ಣಯ ಮಂಡಿಸಲು ನಿಯಮಾವಳಿ ಪಾಲಿಸಬೇಕು. ನಿನ್ನೆ ತಂದಂತಹ ನಿರ್ಣಯ ಕಾರ್ಯಸೂಚಿಯಲ್ಲೂ ಇಲ್ಲ. ನಿಯಮಾವಳಿ ಪ್ರಕಾರ ಇಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕದ ಹಿತಾಸಕ್ತಿಗಾಗಿ ನಿರ್ಣಯ ಎಂದ ಕಾನೂನು ಸಚಿವರು:ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂವಿಧಾನ ವಿರೋಧಿ ನಿರ್ಣಯ ಮಂಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್ ಅವರು, ಕರ್ನಾಟಕದ ಹಿತ ರಕ್ಷಣೆ ಮಾಡುವ ಅಂಶಗಳು ನಿರ್ಣಯದಲ್ಲಿವೆ. ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನಷ್ಟೇ ಹೇಳಿದ್ದೇವೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಸದನದ ಒಕ್ಕೊರಲ ಧ್ವನಿ ಹಾಗೂ ನಾಡಿನ ಏಳು ಕೋಟಿ ಜನರ ಧ್ವನಿ ಇದರಲ್ಲಿ ಅಡಗಿದೆ ಎಂದು ಸಮರ್ಥಿಸಿಕೊಂಡರು.
ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರಲ್ಲದೇ, ಧರಣಿ ನಡೆಸುತ್ತಿರುವ ಅವರ ಧೋರಣೆಯನ್ನು ಖಂಡಿಸಿದರು. ಜೊತೆಗೆ ನಿರ್ಣಯ ಮಂಡಿಸಲು ನಿಮ್ಮ ಪರವಾನಗಿ ತೆಗೆದುಕೊಳ್ಳಬೇಕಿಲ್ಲ ಎಂದು ತಿರುಗೇಟು ನೀಡಿದರು. ಕಾಯ್ದೆ, ಕಾನೂನು ಮತ್ತು ನಿಯಮಾವಳಿ ಪ್ರಕಾರವೇ ನಿರ್ಣಯ ಮಂಡಿಸಿದ್ದೇವೆ. ಕರ್ನಾಟಕದ ಹಿತರಕ್ಷಣೆಯ ಅಂಶಗಳು ನಿರ್ಣಯದಲ್ಲಿವೆ. ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಂಕಿ - ಅಂಶಗಳ ಸಹಿತ ಮಂಡನೆ ಮಾಡಿ ಅನುಮೋದನೆ ಪಡೆದಿದ್ದೇವೆ. ನಿಮಗೆ ರಾಜಕೀಯಬೇಕೋ? ಜನ ಹಿತರಕ್ಷಣೆ ಬೇಕೋ ಎಂಬದನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ನಮಗೆ ಪಾಠ ಮಾಡಬೇಡಿ ಎಂದ ಬೈರೇಗೌಡ:ಇದಕ್ಕೆ ಧ್ವನಿಗೂಡಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ನಿಮ್ಮ ಸರ್ಕಾರ ಇದ್ದಾಗ ಗೋಹತ್ಯೆ ನಿಷೇಧ ಕಾನೂನು ಸೇರಿದಂತೆ ಏನೆಲ್ಲಾ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂಬುದು ನಮಗೂ ಗೊತ್ತಿಗೆ. ಆಗ ನೀವು ಯಾವ ನಿಯಮಾವಳಿಗಳನ್ನು ಪಾಲಿಸಿದ್ದೀರಿ ಎಂದು ಪ್ರಶ್ನಿಸಿದ್ದಲ್ಲದರು. ಅಲ್ಲದೇ ನೀವು ನಮಗೆ ಪಾಠ ಮಾಡಲು ಬರಬೇಡಿ ಎಂದು ಹೇಳಿದರು. ಮತ್ತೆ ಆರ್. ಅಶೋಕ್ ಮಾತನಾಡಿ, ಕೇಂದ್ರವನ್ನು ಟೀಕಿಸಲು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ, ವಿಧಾನಸಭೆ ಇದೆ. ಲೋಕಸಭೆಯಲ್ಲಿ ನಿಮ್ಮ ಸಂಸದರು ಏನು ಮಾಡುತ್ತಿದ್ದಾರೆ. ಅಲ್ಲಿ ಮಾತನಾಡುವ ಧೈರ್ಯವಿಲ್ಲದೆ, ಬಾಯಿ ಮುಚ್ಚಿಕೊಂಡಿದ್ದಾರೆ ಎಂದಾಗ ಕಾಂಗ್ರೆಸ್ ಶಾಸಕರು ನಿಮ್ಮ ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕೆಂದ್ರ ಮತ್ತು ರಾಜ್ಯದ ಅನುದಾನ ಹಂಚಿಕೆ, ಅಧಿಕಾರಕ್ಕೆ ಸಂಬಂಧಿಸಿದಂತೆ 75 ವರ್ಷಗಳಿಂದಲೂ ಚರ್ಚೆ ನಡೆಸಲಾಗುತ್ತಿದೆ. ಒಟ್ಟು 55 ವರ್ಷಗಳ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಆಡಳಿತ ನಡಸಿವೆ ಎಂದು ಹೇಳಿದರು. ಪ್ರತಿಯಾಗಿ ಆಡಳಿತ ಪಕ್ಷದ ಶಾಸಕರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕಾವೇರಿದ ವಾತವರಣ ಉಂಟಾಯಿತು. ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆದು ಇಡೀ ಸದನ ಗೊಂದಲ ಗೂಡಾದ ಹಿನ್ನೆಲೆ ಸಭಾಧ್ಯಕ್ಷರು ಕಲಾಪವನ್ನು ಕೆಲ ಕಾಲ ಮುಂದೂಡಿದರು. ಮತ್ತೆ ಸದನ ಆರಂಭವಾದರೂ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸೋಮವಾರಕ್ಕೆ ಕಲಾಪ ಮುಂದೂಡಿದ ಸ್ಪೀಕರ್;ಅಂತಿಮವಾಗಿ ಗದ್ದಲದ ನಡುವೆ ಕೆಲ ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಯಿತು. ಆ ಬಳಿಕ ಸ್ಪೀಕರ್ ಸದನವನ್ನು ಸೋಮವಾರಕ್ಕೆ ಮುಂದೂಡಿದರು.
ಓದಿ:ಬಜರಂಗದಳದ ವಿರುದ್ಧ ಗೂಂಡಾ ಕಾಯ್ದೆ ಹೇಳಿಕೆ: ಕ್ಷಮೆ ಯಾಚಿಸಿದ ಅಶೋಕ್