ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಬಸವನಗುಡಿಯಲ್ಲಿರುವ ರೇವಣ್ಣ ನಿವಾಸದಲ್ಲಿ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಸಂತ್ರಸ್ತೆ ಹೇಳಿಕೆ ಆಧಾರದ ಮೇರೆಗೆ ಮಹಜರು ಮಾಡಲಾಗಿದ್ದು, ಕಳೆದ ಎರಡು ಗಂಟೆಗಳಿಂದಲೂ ಈ ಕಾನೂನು ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಜರಿಗೆ ಬೇಕಾದ ಅಗತ್ಯ ಸಲಕರಣೆಯೊಂದಿಗೆ ಬಂದಿರುವ ಆರು ಮಂದಿ ಅಧಿಕಾರಿಗಳು ರೇವಣ್ಣ ಅವರ ನಿವಾಸದಲ್ಲೇ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವೆಸಗುವುದಲ್ಲದೇ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಹಲವು ಬಾರಿ ವಿಡಿಯೋ ಕರೆ ಮಾಡಿ ದೌರ್ಜನ್ಯವೆಸಗಿದ್ದರು ಎಂದು ಸಂತ್ರಸ್ತೆ ನೀಡಿದ ದೂರು ಅಧರಿಸಿ ಸಿಐಡಿ ಸೈಬರ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಎಸ್ಐಟಿಯು ಸಿಆರ್ ಪಿಸಿ 164rಅಡಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ್ದರು. ಸಂತ್ರಸ್ತೆ ನೀಡಿದ ವಿವರಗಳ ಆಧಾರದ ಮೇಲೆ ರೇವಣ್ಣ ಮನೆಯಲ್ಲಿಯೂ ಅಧಿಕಾರಿಗಳು ಕಳೆದ ಎರಡು ಗಂಟೆಯಿಂದ ಮಹಜರು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಸಿವೆ.
ಎಸ್ಐಟಿ ವಿರುದ್ಧ ಕಿಡಿಕಾರಿದ ರೇವಣ್ಣ ಪರ ವಕೀಲ:ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ಮಾಡಿದ ಎಸ್ಐಟಿ ವಿರುದ್ಧ ವಕೀಲ ಗೋಪಾಲ್ ಎಂಬುವರು ಕಿಡಿಕಾರಿದ್ದಾರೆ. ನಮ್ಮ ಕಕ್ಷಿದಾರರಾದ ಹೆಚ್.ಡಿ. ರೇವಣ್ಣ ಹೊಳೆನರಸೀಪುರ ಮನೆಯಲ್ಲಿ ಮಹಜರು ನಡೆದಿತ್ತು. ಇದೀಗ ಮತ್ತೊಂದು ಪ್ರಕರಣದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಮಹಜರು ಮಾಡುವ ಸಂದರ್ಭದಲ್ಲಿ ನೋಟಿಸ್ ಕೊಡಬೇಕು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಜರು ಪ್ರಕ್ರಿಯೆ ಮಾಡಲಾಗಿದೆ ಎಂದರು.