ಕರ್ನಾಟಕ

karnataka

ETV Bharat / state

ಸಚಿವ ಪ್ರಹ್ಲಾದ್​ ಜೋಶಿ ಸಹೋದರ ಗೋಪಾಲ್​​​ ಜೋಶಿಗೆ ಹುಡುಕಾಟ ನಡೆಯುತ್ತಿದೆ: ಸಚಿವ ಜಿ. ಪರಮೇಶ್ವರ್ - FRAUD CASE

ಪ್ರಹ್ಲಾದ್​ ಜೋಶಿ ಸಹೋದರ ಸೇರಿ ಮೂವರ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಗೋಪಾಲ್​ ಜೋಶಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಸಚಿವ ಜಿ. ಪರಮೇಶ್ವರ್
ಸಚಿವ ಜಿ. ಪರಮೇಶ್ವರ್ (ETV Bharat)

By ETV Bharat Karnataka Team

Published : Oct 18, 2024, 12:44 PM IST

ಬೆಂಗಳೂರು: 'ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸಹೋದರ ಗೋಪಾಲ್​ ಜೋಶಿಗಾಗಿ ಹುಡುಕಾಟ ನಡೆಯುತ್ತಿದೆ' ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಗೋಪಾಲ್ ಜೋಶಿ ವಿರುದ್ಧ ವಂಚನೆ ಆರೋಪ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, "ಈ ತರಹದ ಕೇಸ್​ಗಳು ಬಂದಾಗ ಗಂಭೀರವಾಗಿಯೇ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಅವರಿಗಾಗಿ ಹುಡುಕಾಟ ನಡೆಯುತ್ತಿದೆ, ಅವರಿನ್ನೂ ಸಿಕ್ಕಿಲ್ಲ" ಎಂದರು.

ಸಚಿವ ಪ್ರಹ್ಲಾದ್​ ಜೋಶಿ ಸಹೋದರ ಗೋಪಾಲ್​​​ ಜೋಶಿಗೆ ಹುಡುಕಾಟ ನಡೆಯುತ್ತಿದೆ: ಸಚಿವ ಜಿ. ಪರಮೇಶ್ವರ್ (ETV Bharat)

ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ನಾವು ಕೋರ್ಟ್​ಗೆ ಕೇಳಿಕೊಂಡಿದ್ದೇವೆ. ಅದು ನಾನ್ ಬೇಲೆಬಲ್ ವಾರಂಟ್​ ಆಗಿದೆ. ಕೋರ್ಟ್ ಸೂಚನೆ ಕೊಟ್ಟರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಬಂಧನ ಪ್ರಕ್ರಿಯೆ ಸೇರಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಜಾತಿ ಗಣತಿಗೆ ಪರ - ವಿರೋಧ ಸಹಜ:ಜಾತಿ ಜನಗಣತಿ ಜಾರಿ ವಿರೋಧಿಸಿ ಶಾಮನೂರು ಶಿವಶಂಕರಪ್ಪ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, "ಶಾಮನೂರು ಅವರು ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಹ್ವಾನ ಮಾಡಿರುವ ವಿಚಾರ ಗೊತ್ತಿಲ್ಲ. ಆದರೆ, 160 ಕೋಟಿ ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗಿದೆ. ವರದಿಯಲ್ಲಿ ಏನಿದೆ ಅಂತ ಗೊತ್ತಾಗಬೇಕಲ್ಲ. ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಚರ್ಚೆ ಮಾಡುತ್ತೇವೆ. ಯಾವ ಸಮುದಾಯ ಎಷ್ಟು ಇದೆ ಅಂತ ಗೊತ್ತಾಗಬೇಕಲ್ಲ. ಪಕ್ಷದಲ್ಲಿ ಕೆಲವರ ವಿರೋಧ ಇರೋದು ಸಹಜ" ಎಂದರು.

"ಜನಗಣತಿ ವಿಚಾರದಲ್ಲಿ ವಿರೋಧ ಇದ್ದೇ ಇರುತ್ತದೆ. ಯಾರೂ ನೂರಕ್ಕೆ ನೂರು ಒಪ್ಪಿಕೊಳ್ಳುವುದಿಲ್ಲ. ಆದರೆ, ಸರ್ಕಾರ ಜಾತಿ ಜನಗಣತಿ ಸಮೀಕ್ಷೆ ಮಾಡಿದೆ, ಇದು ಜನಕ್ಕೂ ಗೊತ್ತಾಗಬೇಕಲ್ಲ. ಜನಗಣತಿ ಸಮೀಕ್ಷೆಯಲ್ಲಿ ಸರಿಯಾದ ಡೇಟಾ ಇಲ್ಲ ಅಂತ ಎಲ್ಲರೂ ಹೇಳುತ್ತಾರೆ. ಈ ವರದಿಯಲ್ಲಿ ಜಾತಿ ಗಣತಿ ಬಂದರೆ ಒಳಮೀಸಲಾತಿಗೂ ಸಹಾಯ ಆಗಲಿದೆ. ಒಳಮೀಸಲಾತಿ ಜಾರಿಗೆ ನಾವು ಬದ್ಧರಾಗಿದ್ದೀವಿ. ಪ್ರಣಾಳಿಕೆಯಲ್ಲೂ ಅದನ್ನು ಹೇಳಿದ್ದೇವೆ" ಎಂದು ತಿಳಿಸಿದರು.

ವರದಿ ಬಳಿಕ ಕ್ರಮ:ಕಲಬುರಗಿ ಜೈಲಿನಲ್ಲಿ ಶಂಕಿತ ಉಗ್ರ ಜುಲ್ಫಿಕರ್ ಅಲಿಯಿಂದ ಜೈಲಧಿಕಾರಿಗಳು, ಖೈದಿಗಳಿಂದ ಹಣ ವಸೂಲಿ ಪ್ರಕರಣವಾಗಿ ಮಾತನಾಡಿ, "ನಮ್ಮ ಡಿಜಿಯವರೇ ಕಲಬುರಗಿ ಜೈಲಿಗೆ ಹೋಗಿ ಪರಿಶೀಲನೆ ಮಾಡುತ್ತಿದ್ದಾರೆ. ಏನಾಗಿದೆ ಅಂತ ಡಿಜಿಯವರು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿದ್ದಾರೆ. ಡಿಜಿಯವರು ಇವತ್ತು ನನಗೆ ಇದರ ಬಗ್ಗೆ ವರದಿ ಕೊಡುತ್ತಾರೆ. ಇದು ಬಹಳ ಗಂಭೀರ ಪ್ರಕರಣ, ಅವರ ವರದಿ ಬಳಿಕ ಕ್ರಮ ತೆಗದುಕೊಳ್ಳುತ್ತೇವೆ" ಎಂದು ಉತ್ತರಿಸಿದರು.

ತುಮಕೂರು ಭಾಗಕ್ಕೆ ವಿ. ನಿಲ್ದಾಣ ಬಂದರೆ ಅನುಕೂಲ:ನೆಲಮಂಗಲ - ಕುಣಿಗಲ್​ ಸಮೀಪ ಎರಡನೇಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾಪ ವಿಚಾರಕ್ಕೆ, "ಕುಣಿಗಲ್ ತುಮಕೂರು ಭಾಗಕ್ಕೆ ಬರುತ್ತೆ. ಈ ಭಾಗಕ್ಕೆ ಅಂದರೆ ತುಮಕೂರಿನ ಸಮೀಪ ಡಾಬಸ್‌ಪೇಟೆ ಬಳಿ ವಿಮಾನ ನಿಲ್ದಾಣ ಮಾಡಬೇಕು ಅಂತ ಹೇಳುತ್ತಿದ್ದಾರೆ. ಇದರ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿಲ್ಲ. ಆದರೆ, ತುಮಕೂರು ಭಾಗಕ್ಕೆ ವಿಮಾನ ನಿಲ್ದಾಣ ಬಂದರೆ ಅನುಕೂಲ". ಏಷ್ಯಾದಲ್ಲೇ ದೊಡ್ಡ ಕೈಗಾರಿಕಾವಲಯ ನಮ್ಮ ಭಾಗದಲ್ಲಿ ಮಾಡುತ್ತಿದ್ದೇವೆ. ಈಗಾಗಲೇ 150 ಕೈಗಾರಿಕೆಗಳು ಬಂದಿವೆ, ಜಪಾನೀಸ್​ ಟೌನ್‌ಶಿಪ್ ಬರುತ್ತಿದೆ. ಹೆಚ್‌ಎ‌ಎಲ್​ ಫ್ಯಾಕ್ಟರಿ ಬಂದಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಇಲ್ಲೇ ಮಾಡಿ ಅಂತ ಕೇಳಿದ್ದೇವೆ. ತಾಂತ್ರಿಕ ಅನುಕೂಲತೆ ಆಧಾರದಲ್ಲಿ ಮಾಡಬೇಕು ಅಂತಿದ್ದಾರೆ, ನೋಡೋಣ".

"ಮುಂದಿನ ದಿನಗಳಲ್ಲಿ ನಾವು ಬೇರೆ ಬೇರೆ ಯೋಜನೆ ಇಟ್ಟುಕೊಂಡಿದ್ದೇವೆ. ಬೆಂಗಳೂರು ವಿಸ್ತರಣೆಯಾಗಿ ತುಮಕೂರನ್ನೂ ಒಂದು ಭಾಗ ಮಾಡುವ ರೀತಿಯಲ್ಲಿ ಗ್ರೇಟರ್​ ಬೆಂಗಳೂರು ಮಾಡಲು ಹೇಳುತ್ತಿದ್ದೇವೆ. ಮೆಟ್ರೋ ರೈಲನ್ನೂ ಕೇಳಿದ್ದೇವೆ. ಇದೆಲ್ಲ ಆದಾಗ ತುಮಕೂರು ಸೇರಿ ಗ್ರೇಟರ್​ ಬೆಂಗಳೂರು ಆಗುವ ವಿಶ್ವಾಸ ಇದೆ" ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆಳಗಾವಿ ಉದ್ಯಮಿ ಕೊಲೆ ಕೇಸ್: ಪತ್ನಿ ಸೇರಿ ಮೂವರು ಆರೋಪಿಗಳ ಬಂಧನ

ABOUT THE AUTHOR

...view details