ಸುಳ್ಯ(ದಕ್ಷಿಣ ಕನ್ನಡ): ಕೊನೆಯ ಹಂತದಲ್ಲಿ ದಂಡ ಸಹಿತವಾಗಿ ಪಾನ್-ಆಧಾರ್ ಜೋಡಣೆ ಮಾಡಿಸಿಕೊಂಡ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಂಡ ಪಾವತಿ ಮಾಡಿ ಆಧಾರ್-ಪಾನ್ ಜೋಡಣೆ ಮಾಡಿಕೊಂಡ ಹಲವರು ಇದೀಗ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡು ವಿವಿಧ ಬಡವರಿಗೆ ದೊರೆಯುತ್ತಿರುವ ಸವಲತ್ತುಗಳ ಫಲಾನುಭವಿಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸರ್ಕಾರದ ವಿವಿಧ ಯೋಜನೆಗಳಿಗೆ ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು. ಆದರೆ ಹಲವಾರು ಬಡವರಿಗೆ ಈ ಮಾಹಿತಿ ತಿಳಿಯದೇ ಅಥವಾ ವಿಳಂಬವಾಗಿ ಜೋಡಿಸುವ ಸಮಸ್ಯೆ ಎದುರಾಗಿತ್ತು. ಈ ಸಂದರ್ಭದಲ್ಲಿ ದಂಡ ರೂಪದಲ್ಲಿ ಆದಾಯ ತೆರಿಗೆ ಇಲಾಖೆಗೆ ಒಂದು ಸಾವಿರ ಹಣ ಪಾವತಿ ಮಾಡಬೇಕಿತ್ತು. ಇದು ಇದೀಗ ಸಮಸ್ಯೆಯಾಗಿ ಪರಿವರ್ತನೆಯಾಗಿದೆ ಎಂದು ತಿಳಿದು ಬಂದಿದೆ. ಈ ದಂಡ ಪಾವತಿಯ ಕಾರಣದಿಂದಾಗಿ ಬಡವರು ಸಹ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಇದರಲ್ಲಿ ಹೆಚ್ಚಿನವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಇವರೂ ಇದೀಗ ಸರಕಾರದ ವಿವಿಧ ಸವಲತ್ತುಗಳಿಂದ ವಂಚಿತರಾಗುವ ಭೀತಿ ಎದುರಾಗಿದೆ.
ಗೃಹಲಕ್ಷ್ಮಿಯಿಂದ ಹೊರಕ್ಕೆ:ಈ ರೀತಿ ಆದಾಯ ತೆರಿಗೆದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಡ ಮಹಿಳೆಯರಿಗೆ ಈಗ ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎನ್ನಲಾಗುತ್ತಿದೆ. ಜತೆಗೆ ಮನೆ ಕಟ್ಟಲು ಸಾಲ ಪಡೆಯುವ ಉದ್ದೇಶಕ್ಕಾಗಿ ಐಟಿ ರಿಟರ್ನ್ಸ್ ಸಲ್ಲಿಸಿದವರೂ ಗೃಹಲಕ್ಷ್ಮಿ ಫಲನುಭವಿಗಳ ಪಟ್ಟಿಯಿಂದ ಹೊರಗಡೆ ಉಳಿದಿದ್ದಾರೆ. ಅಧಿಕಾರಿಗಳಿಂದ ದೊರೆತ ಮಾಹಿತಿಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8,503, ಉಡುಪಿಯಲ್ಲಿ 4,610 ಮಂದಿ ಐಟಿ ಮತ್ತು ಜಿಎಸ್‌ಟಿಯಿಂದಾಗಿ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ 337 ಮಂದಿ ಐಟಿ ಪಾವತಿದಾರರು ಹಾಗೂ 226 ಮಂದಿ ಜಿಎಸ್‌ಟಿ ಪಾವತಿದಾರರು ಹಾಗೂ ಬೆಳ್ತಂಗಡಿಯಲ್ಲಿ 710 ಐಟಿ, 613 ಜಿಎಸ್‌ಟಿ ಪಾವತಿದಾರರು, ಕಡಬ ತಾಲೂಕಲ್ಲಿ 457 ಐಟಿ ಹಾಗೂ 100 ಜಿಎಸ್‌ಟಿ ಪಾವತಿದಾರರು, ಮಂಗಳೂರಿನಲ್ಲಿ 1,470 ಐಟಿ ಮತ್ತು 976 ಜಿಎಸ್‌ಟಿ ಪಾವತಿದಾರರು, ಮೂಡುಬಿದಿರೆಯಲ್ಲಿ 228 ಐಟಿ ಮತ್ತು 75 ಜಿಎಸ್‌ಟಿ ಪಾವತಿದಾರರು, ಮೂಲ್ಕಿಯಲ್ಲಿ 150 ಐಟಿ ಮತ್ತು 93 ಜಿಎಸ್‌ಟಿ ಪಾವತಿದಾರರು, ಪುತ್ತೂರಿನಲ್ಲಿ 586 ಐಟಿ ಹಾಗೂ 436 ಜಿಎಸ್‌ಟಿ ಪಾವತಿದಾರರು ಉಳ್ಳಾಲದಲ್ಲಿ 571 ಮಂದಿ ಐಟಿ ಮತ್ತು 347 ಮಂದಿ ಜಿಎಸ್‌ಟಿ ಪಾವತಿದಾರರು ಸೇರಿದಂತೆ ಒಟ್ಟು 8,503 ಮಂದಿಯ ಸವಲತ್ತು ತಿರಸ್ಕೃತಗೊಂಡಿದೆ. ಸುಳ್ಯ ತಾಲೂಕಿನಿಂದ ಈಗಾಗಲೇ 150ಕ್ಕೂ ಅಧಿಕ ಮಂದಿ ತಾವು ಐಟಿ ಮತ್ತು ಜಿಎಸ್‌ಟಿ ಪಾವತಿದಾರರಲ್ಲ ಎಂಬುದಾಗಿ ಮನವಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಂದ ಲಭ್ಯವಾಗಿದೆ.
ಕಾರು ಇದ್ದವರ ಬಿಪಿಎಲ್ ಕಾರ್ಡ್‌ಗಳೂ ರದ್ದು: ಅದೇ ರೀತಿಯಲ್ಲಿ ಬಿಪಿಎಲ್ ಪಟ್ಟಿಯಲ್ಲಿ ಮತ್ತು ಆದಾಯದಲ್ಲಿ ಹಿಂದುಳಿದವಲ್ಲಿ ಕಡಿಮೆ ಮೊತ್ತದ ಮೌಲ್ಯವಿರುವ ಅಂದರೆ ಸುಮಾರು ಐವತ್ತು ಸಾವಿರ ಅಥವಾ ಒಂದು ಲಕ್ಷ ರೂಪಾಯಿ ಒಳಗಡೆ ಮೌಲ್ಯವಿರುವ ನಾಲ್ಕು ಚಕ್ರದ ವಾಹನಗಳಿದ್ದು, ಅಂತಹ ಹಲವು ಜನರ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಲಕ್ಷಗಟ್ಟಲೆ ಬೆಲೆ ಬಾಳುವ ದ್ವಿಚಕ್ರ ವಾಹನ ಹೊಂದಿರುವವರ ಕಾರ್ಡ್‌ಗಳಿಗೆ ಈ ಮಾನದಂಡ ಅನ್ವಯವಾಗಿಲ್ಲ. ಇಲ್ಲಿ ತಹಶೀಲ್ದಾರರು ನೀಡುತ್ತಿರುವ ಆದಾಯ ಸರ್ಟಿಫಿಕೇಟ್ ಮಾನದಂಡಗಳ ಪಾಲನೆಯಾಗಬೇಕಿತ್ತು. ಆದರೆ ಇದು ಪಾಲನೆಯಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಡಬ ತಾಲೂಕಿನ ಆಹಾರ ಇಲಾಖೆ ನಿರೀಕ್ಷಕ ಶಂಕರ್ ಈ ಬಗ್ಗೆ ಪ್ರತಿಕ್ರಿಯಿಸಿ, "ಪಾನ್ ಕಾರ್ಡ್ ಮತ್ತು ಆಧಾರ್ ಜೋಡಣೆಗೆ ಕೊನೆಯ ಹಂತದಲ್ಲಿ ಒಂದು ಸಾವಿರ ಹಣವನ್ನು ದಂಡ ಸಹಿತವಾಗಿ ಜೋಡಣೆ ಮಾಡಿಸಿಕೊಂಡ ಬಿಪಿಎಲ್ ಕಾರ್ಡುದಾರರು ಸೇರಿದಂತೆ ಆದಾಯ ತೆರಿಗೆ ಪಾವತಿದಾರರಲ್ಲದ ಜನರೂ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆದಾಯ ತೆರಿಗೆ ಪಾವತಿದಾರರು ಎಂಬುದಾಗಿ ನಮಗೆ ಈಗಾಗಲೇ ಬೆಂಗಳೂರು ಮುಖ್ಯ ಕಚೇರಿಯಿಂದ ಬಂದ ಪಟ್ಟಿಯನ್ನು ವಿಂಗಡಣೆ ಮಾಡಿ ವಿವಿಧ ಗ್ರಾಮಾಂತರ ಮಟ್ಟದಲ್ಲಿ ಇರುವ ರೇಷನ್ ಅಂಗಡಿಗಳಿಗೆ ರವಾನಿಸಲಾಗಿದೆ. ಅಲ್ಲಿನ ಸಿಬ್ಬಂದಿ ಅಂತಹವರ ಮಾಹಿತಿಯನ್ನು ಪಡೆದು ನಮ್ಮ ಆಹಾರ ಇಲಾಖೆಯ ಕಚೇರಿಗೆ ಕಳುಹಿಸುತ್ತಿದ್ದಾರೆ. ಅವರನ್ನು ನಾವು ಚಾರ್ಟೆಡ್ ಅಕೌಂಟ್ ಬಳಿಗೆ ಕಳುಹಿಸಿ ಅವರು ತೆರಿಗೆ ಪಾವತಿದಾರರಲ್ಲ ಎಂಬ ದಾಖಲೆಗಳನ್ನು ಪಡೆದು ಅವರ ಬಿಪಿಎಲ್ ಕಾರ್ಡ್ ಯಥಾಪ್ರಕಾರ ಮುಂದುವರೆಸುತ್ತಿದ್ದೇವೆ. ಚಾರ್ಟೆಡ್ ಅಕೌಂಟ್ ಅಧಿಕಾರಿಗಳು ಪರಿಶೀಲನೆ ನಡೆಸುವಾಗ ಹತ್ತರಲ್ಲಿ ಒಬ್ಬರು ಮಾತ್ರ ನಿಜವಾದ ತೆರಿಗೆ ಪಾವತಿದಾರರು ಎಂಬುದಾಗಿ ತಿಳಿದುಬಂದಿದೆ. ಆದ್ದರಿಂದ ಜನರು ಆತಂಕ ಪಡುವ ಅಗತ್ಯತೆ ಇಲ್ಲ." ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಇನ್ನೆರಡೇ ದಿನ ಬಾಕಿ! ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡುವುದು ಹೇಗೆ? - Aadhaar Card Update