ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ನಕ್ಸಲ್ ಶ್ರೀಮತಿಗೆ ಎನ್.ಆರ್. ಪುರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಕಳೆದ ಎರಡು ದಶಕಗಳಿಂದ ಮಾವೋವಾದಿಗಳ ಜೊತೆಗೂಡಿದ್ದ ಶ್ರೀಮತಿ 2002 ರಿಂದ ನಾಪತ್ತೆಯಾಗಿದ್ದಳು.
ಆಕೆ ಮೇಲೆ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 12 ಕ್ಕೂ ಹೆಚ್ಚು ಪ್ರಕರಣಗಳ ದಾಖಲಾಗಿದ್ದವು. ಮಲೆನಾಡಲ್ಲಿ ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿಯನ್ನು ಹಾನಿ ಮಾಡಿದ್ದು, ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಆಯುಧಗಳ ಶೇಖರಣೆ, ಟೆಂಟ್ ಹಾಕಿದ್ದು, ಗನ್ ತೋರಿಸಿ ಹೆದರಿಸಿ ಹಣ, ಆಹಾರ ಸಾಮಗ್ರಿಗಳನ್ನ ತೆಗೆದುಕೊಂಡು ಹೋಗಿದ್ದು, ಪೊಲೀಸರಿಗೆ ಸಪೋರ್ಟ್ ಮಾಡದಂತೆ ಹಳ್ಳಿಗರನ್ನ ಹೆದರಿಸಿದ ಪ್ರಕರಣ ಸೇರಿ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಕಳೆದೊಂದು ತಿಂಗಳ ಹಿಂದೆ ಕೇರಳದ ಕಾಡಿನಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ಕೂಂಬಿಂಗ್ ನಡೆಸುತ್ತಿದ್ದ ವೇಳೆ ಶ್ರೀಮತಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಳು. ಕೇರಳ ಪೊಲೀಸರು ತನಿಖೆ ಬಳಿಕ ಆಕೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆ ಬಳಿಕ ಆಕೆಯನ್ನ ಶೃಂಗೇರಿ ಪೊಲೀಸರ ಸುಪರ್ದಿಗೆ ನೀಡಿದ್ದರು. ಶೃಂಗೇರಿ ಪೊಲೀಸರು ಶೃಂಗೇರಿ ನ್ಯಾಯಾಧೀಶರು ಇಲ್ಲದ ಕಾರಣ ಎನ್.ಆರ್.ಪುರ ಕೋರ್ಟ್ಗೆ ಹಾಜರುಪಡಿಸಿದ್ದರು.
ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ಇಂದು ಶ್ರೀಮತಿ ಮೇಲಿರುವ ಪ್ರಕರಣಗಳ ಸಂಬಂಧ ಸ್ಥಳ ಮಹಜರ್ಗೆ ಕರೆದೊಯ್ದಿದ್ದರು. ತನಿಖೆ ಬಳಿಕ ಈ ಮಹಿಳಾ ನಕ್ಸಲ್ಅನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಓದಿ:ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ; 10 ಮಂದಿ ಸಾವು