ಕರ್ನಾಟಕ

karnataka

By ETV Bharat Karnataka Team

Published : Feb 21, 2024, 1:37 PM IST

ETV Bharat / state

ಪಿಎಸ್​ಐ ಅಮಾನತುಗೊಳಿಸಿದ್ದೇವೆ, ಸದನಕ್ಕೆ ಮಾಹಿತಿ ನೀಡಿದ ಗೃಹ ಸಚಿವರು: ರಾಮನಗರದಲ್ಲಿ ವಕೀಲರ ವಿಜಯೋತ್ಸವ

ಕೊನೆಗೂ ವಕೀಲರ ಹೋರಾಟಕ್ಕೆ ಜಯ ಸಿಕ್ಕಿದೆ. ಇಂದು ಬೆಳಗ್ಗೆ ಸದನ ಆರಂಭಗೊಳ್ಳುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್​, ಪಿಎಸ್​ಐ ಅವರನ್ನು ಅಮಾನತುಗೊಳಿಸಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

Home Minister  PSI suspended  lawyers celebration  ರಾಮನಗರದಲ್ಲಿ ವಕೀಲರಿಂದ ವಿಜಯೋತ್ಸವ  ಪಿಎಸ್​ಐ ಅಮಾನತು
ಪಿಎಸ್​ಐ ಅಮಾನತು

ಸದನದಲ್ಲಿ ಪಿಎಸ್​ಐ ಅಮಾನತುಗೊಳಿಸಿದ್ದೇವೆ ಎಂದ ಗೃಹ ಸಚಿವ

ರಾಮನಗರ:ರಾಮನಗರದಲ್ಲಿ ವಕೀಲರು ಹಾಗೂ ಪೋಲೀಸರ ಮೇಲಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಹೋರಾಟಕ್ಕೆ ಸರ್ಕಾರ ಕೊನೆಗೂ ಮಣಿದಿದೆ. ಐಜೂರು ಠಾಣೆ ಪಿಎಸ್ಐ ಸಯ್ಯದ್ ತನ್ವೀರ್​ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

40 ವಕೀಲರ ಮೇಲೆ ಎಫ್ಐಆರ್ ದಾಖಲು ಮಾಡಿದ ಆರೋಪದ ಹಿನ್ನೆಲೆ ಕಳೆದೊಂದು ವಾರದಿಂದಲೂ ವಕೀಲರಿಂದ ಪ್ರತಿಭಟನೆ ನಡೆಯುತ್ತಿತ್ತು. ಕಳೆದ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮಾಡಿ ವಿಕೋಪಕ್ಕೆ ತಿರುಗಿತ್ತು. ಬೆಂಗಳೂರಿನಲ್ಲಿ ನಾಳೆ ಬೃಹತ್ ಪ್ರತಿಭಟನೆ ಮಾಡುವುದಾಗಿ ವಕೀಲರ ಸಂಘ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಸರ್ಕಾರ ಪಿಎಸ್​ಐ ಅವರನ್ನು ಅಮಾನತುಗೊಳಿಸಿದೆ.

ರಾಮನಗರದಲ್ಲಿ ವಕೀಲರಿಂದ ವಿಜಯೋತ್ಸವ

ಸರ್ಕಾರ ಪಿಎಸ್ಐ ಅಮಾನತುಗೊಳಿಸಿದ ಹಿನ್ನೆಲೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ವಕೀಲರು ವಿಜಯೋತ್ಸವ ಆಚರಿಸಿದರು. ಹೋರಾಟಕ್ಕೆ ಸಂದ ಜಯ. ನಮ್ಮ ನಿರಂತರ ಹೋರಾಟದ ಫಲವಾಗಿ ಅಂತೂ ಐಜೂರು ಠಾಣೆಯ ಪಿಎಸ್ಐ ಅಮಾನತು ಮಾಡಲಾಗಿದೆ ಎಂದು ವಕೀಲರು ಹೇಳುತ್ತಿದ್ದಾರೆ.

ಸದನದಲ್ಲಿ ಪರಮೇಶ್ವರ್​ ಹೇಳಿದ್ದೇನು?:ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್‍ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ವಿಧಾನಸಭೆಗೆ ತಿಳಿಸಿದರು. ಇಂದು ಬೆಳಗ್ಗೆ ಸದನ ಆರಂಭಗೊಂಡಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ನಿನ್ನೆ ನಾವು ಪ್ರಸ್ತಾಪಿಸಿದ ವಕೀಲರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್, ಗೃಹಸಚಿವರಿಗೆ ಹೇಳಿಕೆ ನೀಡಲು ಅವಕಾಶ ಮಾಡಿಕೊಟ್ಟರು.

ರಾಮನಗರದಲ್ಲಿ ವಕೀಲರು ಪ್ರತಿಭಟನೆ ಮಾಡಿದ ವಿಚಾರವನ್ನು ನಿನ್ನೆ ಪ್ರತಿಪಕ್ಷಗಳ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದ್ದರು. ನಿನ್ನೆ ರಾಮನಗರದ ಘಟನೆಗೆ ಸಂಬಂಧಿಸಿದಂತೆ ನೀಡಿದ ಉತ್ತರ ಪ್ರತಿಪಕ್ಷಗಳಿಗೆ ಸಮಾಧಾನ ತಂದಿರಲಿಲ್ಲ. ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್‍ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುವ ಬೇಡಿಕೆ ಇಟ್ಟಿದ್ದರು ಎಂದು ಪರಮೇಶ್ವರ್ ಅವರು ಸದನಕ್ಕೆ ತಿಳಿಸಿದರು.

ಐಜೂರು ಪೊಲೀಸ್ ಠಾಣೆಯ ಪಿಎಸ್‍ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುತ್ತಿದ್ದೇವೆ. ವಕೀಲರ ಪ್ರತಿಭಟನೆಗೆ ಕಾರಣರಾದ ಚಾಂದ್‍ಪಾಷಾ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಿವೈಎಸ್ಪಿ ನೇತೃತ್ವದಲ್ಲಿ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಗೊಂಡಿದೆ. ಪಿಎಸ್‍ಐ ಅಮಾನತು ಮಾಡಿರುವುದರಿಂದ ತನಿಖೆಗೂ ಅನುಕೂಲವಾಗಲಿದೆ. ರಾಮಗನರದಲ್ಲಿ ಈ ಹಿಂದೆ ಕೂಡ ಇಂತಹ ಘಟನೆಗಳು ಆಗಿದ್ದವು ಎಂದು ಗೃಹ ಸಚಿವರು ಸದನದ ಗಮನಕ್ಕೆ ತಂದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಈ ಅಧಿವೇಶನದಲ್ಲಿ ಮೊದಲ ಬಾರಿಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಂಧಾನಸಭೆ ನಡೆಸಿ, ಸಂಧಾನ ಮಾಡಿರುವುದಕ್ಕೆ ಸಭಾಧ್ಯಕ್ಷರನ್ನು ಅಭಿನಂದಿಸುವುದಾಗಿ ಹೇಳಿದರು.

ರಾಮನಗರದ ಹಿಡಿತವನ್ನು ಮೀರಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ನಮ್ಮ ಬೇಡಿಕೆಯಂತೆ ಗೃಹಸಚಿವರು ಕ್ರಮ ಕೈಗೊಂಡಿದ್ದಾರೆ. ಅದಕ್ಕಾಗಿ ಗೃಹ ಸಚಿವರನ್ನು ಅಭಿನಂದಿಸುವುದಾಗಿ ಹೇಳಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ವಕೀಲರು ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡುವುದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳಾಗುತ್ತಿದ್ದವು. ಸರ್ಕಾರ ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಂಡಿದ್ದು, ಈ ಉತ್ತರ ಸಮಾಧಾನ ತಂದಿದೆ ಎಂದು ಆರ್​.ಅಶೋಕ್​ ಹೇಳಿದರು.

ಓದಿ:ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್​ ಬಿಗಿ ಭದ್ರತೆ

ABOUT THE AUTHOR

...view details