ಬೆಂಗಳೂರು :ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದಲ್ಲಿ, ಹಾಸನದ ಪ್ರಥಮ ದರ್ಜೆಯ ಸಹಾಯಕ ನೌಕರ ಬಿ. ಹೆಚ್ ಮಂಜುನಾಥ್ ಅವರನ್ನು ಹುದ್ದೆಯಿಂದ ಅಮಾನುತುಗೊಳಿಸಿ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ತಮ್ಮನ್ನು ಅಮಾನತು ಮಾಡಿರುವ ಆದೇಶವನ್ನು ಪ್ರಶ್ನಿಸಿ ಬಿ. ಹೆಚ್ ಮಂಜುನಾಥ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ತ ಯಾದವ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ ಟಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅಲ್ಲದೇ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಅಲ್ಲದೇ, ಸದರಿ ಕ್ಷೇತ್ರದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಹಾಗಾಗಿ ಅರ್ಜಿದಾರರನ್ನು ಅಮಾನತ್ತಿನಲ್ಲಿ ಇರಿಸುವುದು ಸೂಕ್ತವಲ್ಲ ಎಂದು ತಿಳಿಸಿದ ಪೀಠ, ಜಿಲ್ಲಾ ಚುನಾವಣಾ ಅಧಿಕಾರಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಜತೆಗೆ ಯಾವುದೇ ರಾಜಕೀಯ ಪಕ್ಷದ ಪ್ರಚಾರದಲ್ಲೂ ಭಾಗಿಯಾಗಿಲ್ಲ. ಅವರು ರವಾನೆ ಮಾಡಿದ್ದಾರೆ ಎನ್ನಲಾದ ಸಂದೇಶವನ್ನು ಅವರ ಸಂಬಂಧಿ ಮುಖೇಶ ಗೌಡ ಹೆಚ್. ಜಿ ಅವರು ಪಾರ್ವರ್ಡ್ ಮಾಡಿದ್ದು, ಈ ಸಂದೇಶವನ್ನು ಅರ್ಜಿದಾರರೇ ಸೃಷ್ಟಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅಲ್ಲದೇ, 35 ವರ್ಷದ ಸೇವಾ ಅವಧಿಯಲ್ಲಿ ಅರ್ಜಿದಾರರು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಹಾಗಾಗಿ ಅವರ ಮೇಲೆ ದಾಖಲಾದ ದೂರಿನಲ್ಲಿ ಸತ್ಯಾಂಶವಿಲ್ಲ. ಇದನ್ನು ಪರಿಗಣಿಸಿ ಜಿಲ್ಲಾ ಚುನಾವಣಾ ಅಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ನ್ಯಾಯಪೀಠಕ್ಕೆ ಕೋರಿದರು.
ಪ್ರಕರಣದ ಹಿನ್ನೆಲೆ : ಮಾರ್ಚ್ 31 ರಂದು ಅರ್ಜಿದಾರರ ಅಣ್ಣನ ಮಗನ ಮದುವೆ ಮಾತುಕತೆಯ ನಿಮಿತ್ತ ಅನೇಕ ಜನರು ಒಟ್ಟಾಗಿ ಸೇರಿದ್ದರು. ಈ ವೇಳೆ ಟಿಪಾಯಿ ಮೇಲೆ ಇರಿಸಿದ್ದ ಅವರ ಮೊಬೈಲ್ಗೆ ಮೋಹನ್ ಬಿ.ಎನ್.ಜಿ ಎಂಬುವವರು ಬಿಜೆಪಿ ಪರವಾಗಿ ವಾಟ್ಸ್‌ಅಪ್ ಸಂದೇಶ ಕಳುಹಿಸಿದ್ದು, ಅವರ ಅಳಿಯ ಮುಖೇಶ್ ಗೌಡ ಎಂಬಾತ ಆ ಸಂದೇಶವನ್ನು ಹಾಸನದ ಪ್ರೀತಂ ಜೆ. ಗೌಡ ಎಂಎಲ್ಎ ಎಂಬ ವಾಟ್ಸ್ ಅಪ್ ಗ್ರೂಪ್ಗೆ ರವಾನಿಸುತ್ತಾರೆ. ಈ ಬಗ್ಗೆ ನಾಗೇಂದ್ರ ಬಾಬು ಎನ್ನುವವರು ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸುತ್ತಾರೆ.
ಈ ಹಿನ್ನೆಲೆ ಏ. 8 ರಂದು ಅರ್ಜಿದಾರರನ್ನು ಅಮಾನತುಗೊಳಿಸಿ ಹಾಸನ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ಹೊರಡಿಸುತ್ತಾರೆ. ಇದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ)ಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಕೆಎಟಿ ಇದು ಏಕಪಕ್ಷೀಯ ತಡೆಯಾಜ್ಞೆ ನೀಡುವ ಪ್ರಕರಣವಲ್ಲ. ಆದ್ದರಿಂದ ಪ್ರತಿವಾದಿಗಳ ವಾದ ಆಲಿಸಬೇಕಾಗಿದೆ ಎಂದು ತಿಳಿಸಿ ನೋಟಿಸ್ ಜಾರಿ ಮಾಡಿತ್ತು. ತಡೆ ನೀಡದೆ ನಿರಾಕರಿಸಿದ ಕೆಎಟಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ :ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಅಪರಾಧಿಗೆ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್ - High Court