ಕರ್ನಾಟಕ

karnataka

ETV Bharat / state

ಕಲ್ಲಡ್ಕ ಪ್ರಭಾಕರ ಭಟ್​ ವಿರುದ್ದದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ - Kalladka Prabhakar Bhat - KALLADKA PRABHAKAR BHAT

ಅನ್ಯ ಧರ್ಮೀಯ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿದೆ.

high-court
ಹೈಕೋರ್ಟ್ (ETV Bharat)

By ETV Bharat Karnataka Team

Published : Jul 10, 2024, 9:31 PM IST

ಬೆಂಗಳೂರು : ಅನ್ಯ ಧರ್ಮೀಯ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್‌ಎಸ್) ಮುಖಂಡ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ವಿರುದ್ಧ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಶ್ರೀರಂಗಪಟ್ಟಣ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಮಾಡುವುದು ಮತ್ತು ಈ ಸಂಬಂಧದ ಪ್ರಕರಣದ ರದ್ದು ಕೋರಿ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ‌ ನೀಡಿದೆ.

ಪ್ರಕರಣದ ಹಿನ್ನೆಲೆ : 2023 ರ ಡಿಸೆಂಬರ್ 24 ರ ಮಧ್ಯಾಹ್ನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿನ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ್ದ ಡಾ. ಪ್ರಭಾಕರ ಭಟ್ ಅವರು, ಅನ್ಯ ಧರ್ಮೀಯ‌ ಮಹಿಳೆಯರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದರು. ಮೋದಿ ಬಂದ ಬಳಿಕ ಅವರಿಗೆ ಶಾಶ್ವತ ಗಂಡ ಸಿಕ್ಕಂತಾಗಿದೆ ಎಂದು ಹೇಳಿದ್ದರು ಎಂಬ ಆರೋಪ ಇತ್ತು.

ಈ ಹೇಳಿಕೆಯು ಮಹಿಳೆಯರ ಖಾಸಗಿತ‌ನ, ಮಹಿಳೆಯನ್ನು ಲೈಂಗಿಕವಾಗಿ ನಿಂದಿಸುವ, ಮಹಿಳೆಯ ಮೇಲೆ ಸಾರ್ವಜನಿಕರು ಬಲ ಪ್ರಯೋಗಿಸುವಂತೆ ಪ್ರಚೋದಿಸುವ, ಮಹಿಳೆಗೆ ಲೈಂಗಿಕ, ಜೀವ ಬೆದರಿಕೆ ಒಡ್ಡುವ, ಮಹಿಳೆಯರ ಖಾಸಗಿ ವಿಷಯಗಳನ್ನು ಅಶ್ಲೀಲಗೊಳಿಸುವಿಕೆ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ, ಸಾರ್ವಜನಿಕವಾಗಿ ಮಹಿಳೆಯರ ಘನತೆಗೆ ಅಡ್ಡಿ ಉಂಟು ಮಾಡಿದ ಅಪರಾಧದ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಬಿನ್ ನಜೀರ್ ಅಹ್ಮದ್ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ 2023ರ ಡಿಸೆಂಬರ್ 26ರಂದು ದೂರು ನೀಡಿದ್ದರು. ಅಲ್ಲದೇ, ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಇತರರ ವಿರುದ್ಧ ಐಪಿಸಿ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.

ದೂರಿನ ಅನ್ವಯ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ಶ್ರೀರಂಗಪಟ್ಟಣ ಜೆಎಂಎಫ್​ಸಿ ವಿಚಾರಣಾ ಕೋರ್ಟ್​ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಕಲ್ಲಡ್ಕ್ ಪ್ರಭಾಕರ್​ ಭಟ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ವಿಧಿಸಿದ್ದ ನಿರ್ಬಂಧ ವಿಸ್ತರಿಸಿದ ಹೈಕೋರ್ಟ್

ABOUT THE AUTHOR

...view details