ಕರ್ನಾಟಕ

karnataka

ETV Bharat / state

ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜೀವಗಳ ಬಲಿ : ಹೈಕೋರ್ಟ್ ತರಾಟೆ

ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಹೈಕೋರ್ಟ್​ ತೀವ್ರ ತರಾಟೆ ತೆಗೆದುಕೊಂಡಿದೆ.

high-court
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 11, 2024, 10:35 PM IST

ಬೆಂಗಳೂರು : ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿತನ ಹೊಂದಿದ್ದು, ಪಾದಚಾರಿಗಳ ಜೀವದ ಬಗ್ಗೆ ಯಾವುದೇ ಕಳಕಳಿಯಿಲ್ಲದೇ ಸುಲಭವಾಗಿ ಜೀವ ತೆಗೆಯಲಿದ್ದಾರೆ ಎಂದು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ತನ್ನ ತೋಟಕ್ಕೆ ಹೋಗುವಾಗ ರಸ್ತೆಬದಿಯ ಕೆಇಬಿ ಕಂಬದ ತಂತಿ ಸ್ಪರ್ಶವಾಗಿ, ವಿದ್ಯುತ್ ಪ್ರವಹಿಸಿ ಯುವಕನೋರ್ವ ತೀವ್ರ ಗಾಯಗೊಂಡ ಪ್ರಕರಣದಲ್ಲಿ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಸ್ಕಾಂನ ಜಗಳೂರು ವಿಭಾಗದ ಇಬ್ಬರು ಅಧಿಕಾರಿಗಳು ಮತ್ತು ಓರ್ವ ಲೈನ್ ಮೆನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ಮೌಖಿಕವಾಗಿ ನಿರಾಕರಿಸಿ, ಅರ್ಜಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು. ಅಲ್ಲದೆ, ಅರ್ಜಿದಾರರು ಬೆಸ್ಕಾಂ ಉದ್ಯೋಗಿಗಳಲ್ಲವೇ? ಎಂದು ಪ್ರಶ್ನಿಸಿದರು.

ಅರ್ಜಿದಾರರ ಪರ ವಕೀಲರು ಹೌದು ಎಂದು ಉತ್ತರಿಸಿದರು. ಈ ವೇಳೆ ಪೀಠ, ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಅಧಿಕಾರಿಗಳು. ಅವರ ಬೇಜವಾಬ್ದಾರಿಯಿಂದ ರಸ್ತೆಯಲ್ಲಿ ನಡೆದುಹೋಗುವ ಪಾದಚಾರಿಗಳ ಜೀವನವನ್ನು ಸುಲಭವಾಗಿ ತೆಗೆಯುತ್ತಾರೆ. ಜೊತೆಗೆ, ವಿದ್ಯುತ್ ಪ್ರವಹಿಸುವ ತಂತಿಯು ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಜೀವಕ್ಕೆ ಅಪಾಯವಿರುವ ಆ ತಂತಿಯನ್ನು ತೆರವುಗೊಳಿಸುವುದಿಲ್ಲ.

ದೂರಿನ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ಅವರು ಹವಾನಿಯಂತ್ರಿತ ಕಚೇರಿಯಲ್ಲಿಯೇ ಕುಳಿತು ಎಲ್ಲ ಕೆಲಸ ಮಾಡುತ್ತಾರೆ. ಒಂದು ಸ್ಥಳವನ್ನು ಸಹ ಪರಿಶೀಲನೆ ಮಾಡುವುದಿಲ್ಲ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು?. ಪುಣ್ಯ ಎಂದರೆ ಈ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಪ್ರಕರಣ ರದ್ದು ಕೋರುವ ಬೆಸ್ಕಾಂ ಅಧಿಕಾರಿಗಳ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ ಎಂದು ತಿಳಿಸಿತು.

ವಾದ ಮುಂದುವರೆಸಿದ ವಕೀಲರು, ಅರ್ಜಿ ವಿಚಾರಣೆಯನ್ನು ಮುಂದೂಡಬೇಕು. ಮುಂದಿನ ವಿಚಾರಣೆ ವೇಳೆ ತಮ್ಮ ಹಿರಿಯ ವಕೀಲರು ವಾದ ಮಂಡಿಸುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಅರ್ಜಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.

ಪ್ರಕರಣದ ಹಿನ್ನೆಲೆ :ಜಗಳೂರು ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದ ನಿವಾಸಿ ಆರ್. ರವಿ 2020 ರ ಅ.27ರಂದು ಪೊಲೀಸರಿಗೆ ದೂರು ನೀಡಿದ್ದರು. ಅ.26ರಂದು ಬೆಳಗ್ಗೆ 10.30ಕ್ಕೆ ತಮ್ಮ ಪುತ್ರ ಪಾಂಡುರಂಗ (15) ತೋಟಕ್ಕೆ ಹೋಗುವ ರಸ್ತೆಯಲ್ಲಿ ಹಸುವೊಂದು ಹೊಲಕ್ಕೆ ಹೋಗುತ್ತಿದ್ದನ್ನು ತಡೆಯಲು ಮುಂದಾಗಿದ್ದ.

ಈ ವೇಳೆ ಆತನ ಕಾಲು ರಸ್ತೆಬದಿ ಕೆಇಬಿ ಕಂಬದ ತಂತಿಗೆ ಸ್ಪರ್ಶವಾಗಿ, ವಿದ್ಯುತ್ ಪ್ರವಹಿಸಿದೆ. ಇದರಿಂದ ಪಾಂಡುರಂಗನ ಎರಡು ಕಾಲು ಮತ್ತು ಕೈಗೆ ತೀವ್ರವಾಗಿ ಗಾಯವಾಗಿದೆ. ಘಟನೆಗೆ ಬೆಸ್ಕಾಂನ ದಾವಣಗೆರೆ ವಿಭಾಗದ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಜಿ. ಎಂ ಪ್ರವೀಣ್, ಸೆಕ್ಷನ್ ಆಫೀಸರ್ ಎಸ್. ಸಿ ಚಂದ್ರಶೇಖರ ತಿಲಕ್ ಮತ್ತು ಲೈನ್ ಮ್ಯಾನ್ ಆಸೀಫ್ ಸೋಮಲಪುರ ಕಾರಣಕರ್ತರು ಎಂದು ಆರೋಪಿಸಿ, ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ :ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸಿಡಿದು ತಂದೆ - ಮಗು ಸಾವು: ಬೆಸ್ಕಾಂ ಜೆಇ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಣೆ

ABOUT THE AUTHOR

...view details