ವಿಶೇಷ ಹಲಸಿನ ತಳಿಗಳ ಬಗ್ಗೆ ಮಾಹಿತಿ ತಿಳಿಸಿದ ರೈತ ಮತ್ತು ಅಧಿಕಾರಿಗಳು (ETV Bharat) ಶಿವಮೊಗ್ಗ:ಮಲೆನಾಡಿನ ಹಳದಿ ರುದ್ರಾಕ್ಷಿ, ಕೆಂಪು ರುದ್ರಾಕ್ಷಿ, ಕೆಂಪು (ಆರ್‌ಟಿಬಿ) ಹಾಗೂ ಕಿತ್ತಳೆ (ಆರ್‌ಪಿಎನ್) ಬಣ್ಣದ ಹಲಸಿನ ತಳಿಗೆ ಕೇಂದ್ರ ಸರ್ಕಾರದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಮಾನ್ಯತೆ ನೀಡಿದೆ. ಈ ಹಲಸಿನ ಹಣ್ಣುಗಳು ಸಕ್ಕರೆ, ಬೆಲ್ಲದ ಸಿಹಿಯೊಂದಿಗೆ ಪೈಪೋಟಿಗೆ ಇಳಿಯುವ ವಿಶಿಷ್ಟ ರುಚಿ ಹಾಗೂ ಆಸ್ವಾದವನ್ನು ನೀಡುತ್ತವೆ.
ಅಳಿವಿನಂಚಿನಲ್ಲಿರುವ ಈ ಅಪರೂಪದ ತಳಿಗಳನ್ನು ಸಂರಕ್ಷಿಸಲು ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸಲು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯವು ಈ ತಳಿಗಳ ಬಗ್ಗೆ 3-4 ವರ್ಷಗಳ ಕಾಲ ಅಧ್ಯಯನ ನಡೆಸಿದೆ. ಬಳಿಕ ಪ್ರಾಧಿಕಾರಕ್ಕೆ ಸಂಪೂರ್ಣ ಮಾಹಿತಿ ಸಲ್ಲಿಸಲಾಗಿದೆ.
ಪ್ರಾಧಿಕಾರದಿಂದ ನೇಮಕಗೊಂಡ ವಿಜ್ಞಾನಿಗಳ ತಂಡ ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿ, ವಿವರವಾದ ಮಾಹಿತಿ ಸಂಗ್ರಹಿಸಿದೆ. ನಂತರ ನೋಂದಣಿಗೆ ಶಿಫಾರಸು ಮಾಡಿದೆ. ಇದರಿಂದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ಇವರ ಬಳಿ ಮಾಹಿತಿ ಸಂಗ್ರಹಕ್ಕಾಗಿ ಶಿವಮೊಗ್ಗದ ಪ್ರತಿಯೊಬ್ಬ ಹಲಸು ಬೆಳೆಗಾರರ ಬಳಿ ಬಂದು ಪರೀಕ್ಷಿಸಿ, ಮಾಹಿತಿ ಪಡೆದು ಪ್ರಮಾಣಪತ್ರವನ್ನು ಅನ್ನು ವಿತರಿಸಿದೆ.
ಈ ಅಪರೂಪದ ತಳಿಯನ್ನು ಉಳಿಸಿ ಬೆಳೆಸುತ್ತಿರುವ ಹೊಸನಗರ ತಾಲ್ಲೂಕಿನ ಬರುವೆ ಗ್ರಾಮದ ಅನಂತಮೂರ್ತಿ ಜವಳಿ ಅವರು ಹಳದಿ ರುದ್ರಾಕ್ಷಿ -JAR ಹಲಸಿನ ಹಣ್ಣನ್ನು ಸಂರಕ್ಷಿಸಿದ್ದಾರೆ. ಹೊಸನಗರ ತಾಲೂಕಿನ ವರಕೋಡಿನ ದೇವರಾಜ ಕಾಂತಪ್ಪಗೌಡ ಅವರು ಕೆಂಪು ರುದ್ರಾಕ್ಷಿ -DSV ತಳಿಯನ್ನು ಸಂರಕ್ಷಿಸಿದ್ದಾರೆ. ಸಾಗರ ತಾಲೂಕಿನ ಆನಂದಪುರದ ಪ್ರಕಾಶನಾಯಕ್ ಅವರು ಅರೆಂಜ್ ರುದ್ರಾಕ್ಷಿ ಹಲಸಿನ ಹಣ್ಣು-RPN ತಳಿಯನ್ನು ಸಂರಕ್ಷಿಸಿದ್ದಾರೆ. ಸಾಗರ ತಾಲೂಕು ಮಂಕಳಲೆ ಗ್ರಾಮದ ರಾಜೇಂದ್ರ ಭಟ್ಟ ಅವರು ರೆಡ್ ಹಲಸಿನ ಹಣ್ಣು RTB ಅನ್ನು ಸಂರಕ್ಷಿಸಿ ಬೆಳೆಸುತ್ತಿದ್ದಾರೆ. ಇವರುಗಳಿಗೆ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ನಾಲ್ಕು ಹಲಸಿನ ತಳಿಯ ವಿಶೇಷತೆಗಳು:
1. ಹಳದಿ ರುದ್ರಾಕ್ಷಿ - ಜೆ.ಎ.ಆರ್ (REG/2022/0144):ಈ ಹಲಸಿನ ಮರವು ಪಿರಮಿಡ್ ಆಕಾರವನ್ನು ಹೊಂದಿದ್ದು, ಮರದ ಎಲ್ಲಾ ಭಾಗಗಳಲ್ಲಿ ಹಣ್ಣು ಬಿಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ 4 ವರ್ಷಕ್ಕೆ ಹಾಗೂ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ 6 ವರ್ಷಕ್ಕೆ ಹಣ್ಣುಗಳು ಕೊಯ್ಲಿಗೆ ಸಿದ್ಧವಾಗಿರುತ್ತವೆ. ಈ ತಳಿಯು ಬೇಗನೆ ಹಣ್ಣು ಬಿಡುವುದರ ಜೊತೆಗೆ ಹೆಚ್ಚು ದಿನಗಳವರೆಗೆ ಫಸಲನ್ನು ಪಡೆಯಬಹುದು. ಮರದಲ್ಲಿ ಹಣ್ಣುಗಳು ಗೊಂಚಲುಗಳಿಂದ ಕೂಡಿರುತ್ತದೆ.
ರುದ್ರಾಕ್ಷಿ ಹಲಸಿಗೆ ಸಿಕ್ತು ಪೇಟೆಂಟ್ (ETV Bharat) ಮಾರ್ಚ್‌ನಿಂದ ಆಗಸ್ಟ್‌ವರೆಗೂ ಕೊಯ್ಲನ್ನು ಮಾಡಬಹುದು. ಹಣ್ಣುಗಳು ಮಳೆಗಾಲದಲ್ಲೂ ಕೂಡ ಹೆಚ್ಚಿನ ರೀತಿಯ ನೀರಿನ ಅಂಶವನ್ನು ಹೊಂದಿರುವುದಿಲ್ಲ. ಹಣ್ಣುಗಳು ಕಡಿಮೆ ಮೇಣದಿಂದ ಕೂಡಿದ್ದು, 1.5 ಯಿಂದ 2 ಕೆ.ಜಿ ಚಿಕ್ಕಗಾತ್ರದ ಹಣ್ಣನ್ನು ಪಡೆಯಬಹುದು. ಹಣ್ಣಿನ ತೊಳೆ ಕಡು ಹಳದಿ ಬಣ್ಣವಾಗಿದ್ದು, ಪ್ರತಿ ಕೆ.ಜಿಗೆ 20 ತೊಳೆಗಳನ್ನು ಹೊಂದಿರುತ್ತದೆ. ಇದರ ಮೈಸೊಳೆ ದಪ್ಪವಾಗಿರುತ್ತದೆ. ಪ್ರತಿ ಮರ ವರ್ಷಕ್ಕೆ 300 ಹಣ್ಣುಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಎಕರೆಗೆ 180 ಕ್ವಿಂಟಾಲ್ ಇಳುವರಿಯನ್ನು ಪಡೆಯಬಹುದಾಗಿದೆ. ತೊಳೆಗಳು ಹೆಚ್ಚು ಸಿಹಿಯಿಂದ ಕೂಡಿದ್ದು (TSS-28%). ಶೇ. 70 ರಷ್ಟು ತೊಳೆಗಳನ್ನು ಪಡೆಯುವುದರ ಜೊತೆಗೆ ಬೀಜದ ಗಾತ್ರ ಚಿಕ್ಕದಾಗಿರುತ್ತದೆ.
2. ಅರೆಂಜ್-ಆರ್.ಪಿ.ಎನ್ (REG/2022/0145): ಈ ಮರವು ಪಿರಮಿಡ್ ಆಕಾರವನ್ನು ಹೊಂದಿದ್ದು, ಮರದ ಎಲ್ಲಾ ಭಾಗಗಳಲ್ಲಿ ಹಣ್ಣುಗಳನ್ನು ಕಾಣಬಹುದು. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ 4 ವರ್ಷಕ್ಕೆ ಕೊಯ್ಲಿಗೆ ಸಿದ್ಧವಾಗುತ್ತದೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸೆಪ್ಟೆಂಬರ್ನಿಂದ ಮೇ ತಿಂಗಳಿನಲ್ಲಿ ಕಟಾವಿಗೆ ಸಿದ್ಧವಾಗಿರುತ್ತದೆ. ಹಣ್ಣುಗಳು ಕಡಿಮೆ ಮೇಣದಿಂದ ಕೂಡಿದ್ದು, ಪ್ರತಿ ಹಣ್ಣು 15 ಕೆ.ಜಿ ತೂಕವನ್ನು ಹೊಂದಿರುತ್ತದೆ. ಹಣ್ಣಿನ ತೊಳೆ ಕಿತ್ತಳೆ ಬಣ್ಣದಿಂದ ಆಕರ್ಷಿತವಾಗಿದ್ದು, ಪ್ರತಿ ಕೆ.ಜಿಗೆ 10 ರಿಂದ 12 ತೊಳೆಗಳನ್ನು ಹೊಂದಿರುತ್ತದೆ. ಇದರ ಮೈಸೊಳೆ ದಪ್ಪವಾಗಿರುತ್ತದೆ. ಪ್ರತಿ ಮರದಿಂದ ವರ್ಷಕ್ಕೆ 25 ರಿಂದ 35 ಹಣ್ಣುಗಳನ್ನು ಪಡೆಯಬಹುದು. ಪ್ರತಿ ಎಕರೆಗೆ 250 ಕ್ವಿಂಟಾಲ್ ಇಳುವರಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿ TSS-30% ಹಾಗೂ ಕಡಿಮೆ ಮಳೆಬೀಳುವ ಪ್ರದೇಶದಲ್ಲಿ ತೊಳೆಗಳು ಹೆಚ್ಚು ಸಿಹಿಯಿಂದ (TSS-37%) ಕೂಡಿರುತ್ತವೆ.
3. ಕೆಂಪು ರುದ್ರಾಕ್ಷಿ- DSV (REG/2022/0146) : ಮರವು ಪಿರಮಿಡ್ ಆಕಾರದಲ್ಲಿ ಬೆಳೆಯುವುದರ ಜೊತೆಗೆ ಮರದ ಎಲ್ಲಾ ಭಾಗಗಳಲ್ಲಿ ಆಕರ್ಷಕವಾದ ಹಣ್ಣುಗಳನ್ನು ಕಾಣಬಹುದು. ಮರದಲ್ಲಿ ಹಣ್ಣುಗಳು ಗೊಂಚಲುಗಳಿಂದ ಕೂಡಿದ್ದು, ಮೇ-ಜೂನ್ ತಿಂಗಳಿನಲ್ಲಿ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಹಣ್ಣುಗಳು ಕಡಿಮೆ ಮೇಣದಿಂದ ಕೂಡಿದ್ದು, ಗಾತ್ರ ಚಿಕ್ಕದಾಗಿರುತ್ತದೆ. ಪ್ರತಿ ಹಣ್ಣು 3 ಕೆ.ಜಿ ತೂಕವನ್ನು ಹೊಂದಿರುತ್ತದೆ. ಹಣ್ಣುಗಳ ಸಿಪ್ಪೆಯು ಅತ್ಯಂತ ನಯವಾಗಿರುತ್ತದೆ. ಹಣ್ಣಿನ ತೊಳೆ ಕೆಂಪು ಬಣ್ಣದಿಂದ ಆಕರ್ಷಿತವಾಗಿದ್ದು, ಪ್ರತಿ ಕೆ.ಜಿಗೆ 15 ರಿಂದ 16 ತೊಳೆಗಳನ್ನು ಹೊಂದಿರುತ್ತದೆ. ಪ್ರತಿ ಮರ ವರ್ಷಕ್ಕೆ 100 ರಿಂದ 125 ಹಣ್ಣುಗಳನ್ನು ನೀಡುತ್ತದೆ. ಪ್ರತಿ ಎಕರೆಗೆ 120 ಕ್ವಿಂಟಾಲ್ ಇಳುವರಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ತೊಳೆಗಳು ಹೆಚ್ಚು ಸಿಹಿಯಿಂದ ಕೂಡಿದ್ದು (TSS-28%), ಶೇ. 60 ರಷ್ಟು ತೊಳೆಗಳನ್ನು ಪಡೆಯಬಹುದಾಗಿದೆ.
4. ರೆಡ್-RTB (REG/2022/0147) :ಈ ಮರವು ಪಿರಮಿಡ್ ಆಕಾರವನ್ನು ಹೊಂದಿದ್ದು, ಮರದ ಎಲ್ಲಾ ಭಾಗಗಳಲ್ಲಿ ಆಕರ್ಷಕವಾದ ಹಣ್ಣುಗಳನ್ನು ಕಾಣಬಹುದು. ಮಾರ್ಚ್‌ನಿಂದ ಜೂನ್ ತಿಂಗಳಿನಲ್ಲಿ ಕಟಾವುಗೆ ಸಿದ್ಧವಾಗಿರುತ್ತದೆ. ಹಣ್ಣುಗಳು ಕಡಿಮೆ ಮೇಣವನ್ನು ಹೊಂದಿದ್ದು, ಈ ತಳಿಯ ಹಣ್ಣುಗಳು ಮಳೆಗಾಲದಲ್ಲೂ ಕೂಡ ಕಡಿಮೆ ನೀರಿನ ಅಂಶವನ್ನು ಹೊಂದಿರುತ್ತದೆ. ಹಣ್ಣುಗಳ ಗಾತ್ರ ದೊಡ್ಡದಾಗಿದ್ದು, ಪ್ರತಿ ಹಣ್ಣು 10 ರಿಂದ 15 ಕೆ.ಜಿ ತೂಕವನ್ನು ಹೊಂದಿರುತ್ತದೆ. ಹಣ್ಣಿನ ತೊಳೆ ಕೆಂಪು ಬಣ್ಣದಿಂದ ಕೂಡಿದ್ದು, ಪ್ರತಿ ಕೆ.ಜಿಗೆ 20 ರಿಂದ 30 ತೊಳೆಗಳನ್ನು ಹೊಂದಿರುತ್ತದೆ. ಈ ತಳಿಯ ಮೈಸೊಳೆ ದಪ್ಪವಾಗಿರುತ್ತದೆ. ತೊಳೆಗಳು ಗರಿಗರಿಯಾಗಿದ್ದು, ಹೆಚ್ಚು ಸಿಹಿಯಿಂದ ಕೂಡಿರುತ್ತವೆ (TSS-34%). ಪ್ರತಿ ಮರ ವರ್ಷಕ್ಕೆ 50 ರಿಂದ 75 ಹಣ್ಣುಗಳನ್ನು ನೀಡುತ್ತದೆ. ಪ್ರತಿ ಎಕರೆಗೆ 200 ಕ್ವಿಂಟಾಲ್ ಇಳುವರಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಣ್ಣುಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಶೇ. 60 ರಷ್ಟು ಹಣ್ಣು ತೊಳೆಗಳಿಂದ ಕೂಡಿರುತ್ತದೆ.
ರುದ್ರಾಕ್ಷಿ ಹಲಸಿಗೆ ಸಿಕ್ತು ಪೇಟೆಂಟ್ (ETV Bharat) ಅನಂತ ಮೂರ್ತಿ ಜವಳಿ ಅವರು ತಮ್ಮ ಹಳದಿ ರುದ್ರಾಕ್ಷಿ ಹಲಸಿಗೆ ಮನ್ನಣೆ ಸಿಕ್ಕಿದ್ದಕ್ಕೆ ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಈ ಹಣ್ಣನ್ನು ನಮ್ಮ ತಾಯಿ ಬೆಳೆಸಿದ್ದರು. ಒಳ್ಳೆ ಹಣ್ಣು ತಿಂದ್ರೆ ಅದನ್ನು ಬೆಳೆಸು ಎಂಬ ಮಾತಿದೆ. ಇದನ್ನು ನಮ್ಮ ತಾಯಿ ಬೆಳೆಸಿದ್ರು, ಇದು ಹಳದಿ ಬಣ್ಣದ ರುದ್ರಾಕ್ಷಿಯಾಗಿದ್ದು ಇದರ ಸಾವಿರ ಗಿಡ ಮಾಡಿ ಇದನ್ನು ತೆಗೆದುಕೊಂಡು ಹೋಗಿದ್ದಾರೆ. ಇದರ ಗುಣ ಏನೆಂದ್ರೆ, ಇದರಲ್ಲಿ ಕಸ ಬಹಳ ಕಡಿಮೆ. ಇದರ ಸೊಳೆ ಬಿಡಿಸಿದಾಗ ಯಾವುದೇ ಬೇಡವಾದ ವಸ್ತು ಬರಲ್ಲ. ಸಾಮಾನ್ಯ ಹಲಸಿನಲ್ಲಿ ಬಿಸಾಡುವ ಎಸಳು ಬಹಳ ಇರುತ್ತದೆ. ಮಳೆಗಾಲದಲ್ಲಿ ಇದರ ಸಿಹಿ ಅಂಶ ಕಡಿಮೆ ಆಗುತ್ತದೆ. ಆದರೆ ರುದ್ರಾಕ್ಷಿ ಹಲಸು ಮಳೆಗಾಲದಲ್ಲೂ ಸಹ ತನ್ನ ಸಿಹಿಯನ್ನು ಕಡಿಮೆ ಮಾಡಿಕೊಳ್ಳುವುದಿಲ್ಲ. ಇದು ಚಿಕ್ಕ ಗಾತ್ರದಿಂದ ಕೂಡಿದ್ದು, ಮರದಲ್ಲಿ ಗೊಂಚಲು ರೀತಿಯಲ್ಲಿ ಬೆಳೆಯುತ್ತದೆ. ಒಂದು ಮರದಲ್ಲಿ ನೂರಾರು ಕಾಯಿಗಳನ್ನು ಬಿಡುತ್ತದೆ. ಇದರಲ್ಲಿ ಮೇಣದ ಅಂಶ ಕಡಿಮೆ. ಇದರಲ್ಲಿನ ಇನ್ನೂಂದು ವಿಶೇಷ ಅಂಶ ಏನೇಂದ್ರೆ, ಇದರಲ್ಲಿ ಬೀಜ ಸಣ್ಣದಾಗಿರುತ್ತದೆ. ಸಾಕಷ್ಟು ರೈತರು ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ.
ಇದಕ್ಕೆ ಇಂದು ಬಹಳ ಖುಷಿಯಾಗಿದೆ. ಕಾರಣ ಏನಂದ್ರೆ ರುದ್ರಾಕ್ಷಿ ಹಲಸಿನ ತಳಿಯನ್ನು ನನ್ನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿ ಭಾರತ ಸರ್ಕಾರದಿಂದ ಒಂದು ಪತ್ರ ಸಿಕ್ಕಿದೆ. ಇದಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದವರು ನಮಗೆ ಸಹಾಯ ಮಾಡಿದ ಪರಿಣಾಮ ನನಗೆ ಈ ಸರ್ಟಿಫಿಕೆಟ್ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಪ್ರಯತ್ನದ ಫಲವಾಗಿ ರುದ್ರಾಕ್ಷಿ ಹಲಸಿನ ನಾಲ್ಕು ತಳಿಗಳಿಗೆ ಜಾಗತಿಕ ಮಾನ್ಯತೆ ಸಿಗುವಂತೆ ಮಾಡಿದೆ. ಇದಕ್ಕಾಗಿ ನವದೆಹಲಿಯ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ನಾಲ್ಕು ರುದ್ರಾಕ್ಷಿ ತಳಿಗೆ ಅಧಿಕೃತ ಮಾನ್ಯತೆಯನ್ನು ಕೊಡಿಸಲಾಗಿದೆ.
ಹಲಸಿನ ಹಣ್ಣುಗಳಿಗೆ ಮಾನ್ಯತೆ ಸಿಕ್ಕಿರುವುದರ ಕುರಿತು ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ಅಧಿಕಾರಿ ನಾಗರಾಜ ಅಡಿವೆಪ್ಪ ಅವರು ಮಾತನಾಡಿ, ಮಲೆನಾಡಿನ ಪ್ರಸಿದ್ಧ ನಾಲ್ಕು ಹಲಸಿನ ತಳಿಗಳನ್ನು ಭಾರತೀಯ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ವತಿಯಿಂದ ಇಂದು ನೋಂದಣಿಯಾಗಿದೆ. ಈ ತಳಿಯನ್ನು ಸಮಗ್ರವಾಗಿ 3 ವರ್ಷ ಅಧ್ಯಯನ ಮಾಡಿ, ಇದನ್ನು ಪ್ರಾಧಿಕಾರಕ್ಕೆ ಕಳುಹಿಸಿದಾಗ ಅವರು ಪರಿಶೀಲಿಸಿ ಇದನ್ನು ನೋಂದಣಿ ಮಾಡಿಕೊಂಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಸಂಬಂಧ ಯಾವುದೇ ವಿಶೇಷ ತಳಿಗಳಿದ್ದರು ಸಹ ಅದನ್ನು ಕಾಪಾಡಿಕೊಳ್ಳಬೇಕಿದೆ. ಇವುಗಳಿಗೆ ಪ್ರಾಧಿಕಾರದ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನಶಿಸಿ ಹೋಗುವ ತಳಿಗಳನ್ನು ಸಂರಕ್ಷಣೆ ಮಾಡಿದಂತೆ ಆಗುತ್ತದೆ ಎಂದರು.
ಓದಿ:ಐದು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿಯ ಅದ್ಧೂರಿ ಜಾತ್ರೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ - Grand Bhandara Jatre