ಬೆಂಗಳೂರು: ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಎರಡು ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಎರಡು ಬಾರಿಯೂ ಅಧಿಕಾರದ ರುಚಿ ನೋಡಿದೆ. ಎರಡು ಬಾರಿಯೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಪುತ್ರ ಹೆಚ್.ಡಿ ಕುಮಾರಸ್ವಾಮಿಗೆ ರಾಜಕೀಯವಾಗಿ ಬಹುದೊಡ್ಡ ಲಾಭವೇ ಆಗಿದೆ. ಈ ಕುರಿತ ವರದಿ ಇಲ್ಲಿದೆ.
ರಾಜ್ಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು 2004ರಲ್ಲಿ. ಅಂದು ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ ಸಂಖ್ಯಾಬಲದ ಕೊರತೆಯಿಂದ ಸರ್ಕಾರ ರಚಿಸಲಾಗಲಿಲ್ಲ. ಇದರ ಲಾಭ ಪಡೆದ ಕಾಂಗ್ರೆಸ್, ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಿತು. ಮೊದಲ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ಗೆ ಡಿಸಿಎಂ ಸ್ಥಾನ ಸಿಕ್ಕಿತು.
20-20 ಸರ್ಕಾರ; ಆದರೆ ಬದಲಾದ ರಾಜಕೀಯ ವಿದ್ಯಮಾನದಿಂದ ಕಾಂಗ್ರೆಸ್ಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಜೆಡಿಎಸ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಹೊಸ ಮೈತ್ರಿ ರಚಿಸಿಕೊಂಡಿತು. ಪರಿಣಾಮವಾಗಿ 2006ರಲ್ಲಿ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ಬಾರಿ ಶಾಸಕರಾಗಿದ್ದ ಜೆಡಿಎಸ್ನ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. 20-20 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದದಂತೆ ಸಮ್ಮಿಶ್ರ ಸರ್ಕಾರ ರಚನೆಯಾಗಿ 20 ತಿಂಗಳ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು.
20 ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡದ ಕಾರಣ ಮೈತ್ರಿ ಕಡಿದುಕೊಂಡ ಬಿಜೆಪಿ ವಚನಭ್ರಷ್ಟ ಆರೋಪವನ್ನು ಜೆಡಿಎಸ್ ಮೇಲೆ ಹೊರಿಸಿ ರಾಜ್ಯದ ಜನರ ಮುಂದೆ ಹೋಗಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಇದರಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ದೋಸ್ತಿ ಹಳಸಿತು. ಆದರೆ 2023ರ ವಿಧಾನಸಭಾ ಚುನಾವಣೆ ನಂತರ ಮತ್ತೆ ಬಿಜೆಪಿ ಸನಿಹದತ್ತ ಮುಖ ಮಾಡಿದ ಜೆಡಿಎಸ್ ಲೋಕಸಭಾ ಚುನಾವಣೆಗೂ ಮೊದಲೇ ಚುನಾವಣಾ ಪೂರ್ವ ಮೈತ್ರಿಗೆ ಒಪ್ಪಿಗೆ ನೀಡಿ ಎನ್ಡಿಎ ಒಕ್ಕೂಟಕ್ಕೆ ಸೇರಿತು.
ಕ್ಯಾಬಿನೆಟ್ ದರ್ಜೆ ಸ್ಥಾನಮಾನ; ಇದೀಗ ಮೋದಿ ಸರ್ಕಾರ ಮೂರನೇ ಬಾರಿಗೆ ಕೇಂದ್ರದಲ್ಲಿ ರಚನೆಯಾಗುತ್ತಿದ್ದು, ಮಿತ್ರಪಕ್ಷ ಜೆಡಿಎಸ್ಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಿದೆ. ಮಂಡ್ಯದಿಂದ ಆಯ್ಕೆಯಾಗಿ ಬಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿಗೆ ಕೇಂದ್ರ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದೆ.
2006 ರಲ್ಲಿ ಮೊದಲ ಬಾರಿ ಬಿಜೆಪಿ ಸಖ್ಯ ಬೆಳೆಸಿದ್ದ ಜೆಡಿಎಸ್ಗೆ ಮುಖ್ಯಮಂತ್ರಿ ಗಾದಿ ಸಿಕ್ಕಿತ್ತು. 2024ರಲ್ಲಿ ಎರಡನೇ ಬಾರಿಗೆ ಮತ್ತೊಮ್ಮೆ ಬಿಜೆಪಿ ಸಖ್ಯ ಬೆಳೆಸಿರುವ ಜೆಡಿಎಸ್ ಕೇವಲ 2 ಸದಸ್ಯ ಬಲ ಹೊಂದಿದ್ದರೂ ಕೇಂದ್ರ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಎರಡು ಬಾರಿಯೂ ಹೆಚ್.ಡಿ ಕುಮಾರಸ್ವಾಮಿಗೆ ರಾಜಕೀಯವಾಗಿ ಹೆಚ್ಚಿನ ಲಾಭವಾಗಿದೆ. ಒಮ್ಮೆ ಮುಖ್ಯಮಂತ್ರಿಯಾಗಿದ್ದರು. ಈಗ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
2006 ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಒಪ್ಪಿಗೆ ಇರಲಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ದೇವೇಗೌಡರ ವಿರೋಧದ ನಡುವೆಯೇ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಮೈತ್ರಿ ದೇವೇಗೌಡರ ಸಮ್ಮುಖದಲ್ಲಿಯೇ ಆಗಿದೆ. ಅಲ್ಲದೆ ಎನ್ಡಿಎ ಸರ್ಕಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಂಡು ಜೆಡಿಎಸ್ಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಖುದ್ದು ದೇವೇಗೌಡರೇ ಮೋದಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಮತ್ತೊಂದು ವಿಶೇಷ ಎಂದರೆ 1999 ರಲ್ಲಿ ಜನತಾದಳ ವಿಭಜನೆಯಾಗಿ ಜೆ.ಹೆಚ್ ಪಟೇಲ್ ನೇತೃತ್ವದಲ್ಲಿ ಸಂಯುಕ್ತ ಜನತಾದಳ ಹೆಚ್.ಡಿ ದೇವೇಗೌಡ ನೇತೃತ್ವದಲ್ಲಿ ಜಾತ್ಯತೀತ ಜನತಾದಳ ರಚನೆಯಾಯಿತು. ಜಾತ್ಯತೀತ ಜನತಾದಳ ಅಸ್ತಿತ್ವಕ್ಕೆ ಬಂದ ನಂತರ ಈ ಪಕ್ಷದ ಮೊದಲ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆದರೆ ಈ ಪಕ್ಷದಿಂದ ಕೇಂದ್ರ ಸಚಿವ ಸ್ಥಾನ ಅಲಂಕರಿಸುತ್ತಿರುವುದೂ ಕುಮಾರಸ್ವಾಮಿಯೇ ಆಗಿದ್ದಾರೆ.
ಇದನ್ನೂ ಓದಿ:ಮೋದಿ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ: ಯಾರಿಗೆ ಸಂಪುಟ ದರ್ಜೆ ಸ್ಥಾನ? - MODI CABINET