ಮಂಗಳೂರು: "ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸಗಳಾಗುತ್ತಿಲ್ಲ. ಹಾಗಾಗಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಲ್ಲಿ ಮಾತನಾಡಿ ಕಾಯಕಲ್ಪ ಕೊಡುವ ಕೆಲಸ ಮಾಡಲಾಗುತ್ತದೆ. ಆದ್ದರಿಂದ ಅಪ್‌ಗ್ರೇಡ್‌ಗಾಗಿ ಮುಂದಿನ ಒಂದೂವರೆ ತಿಂಗಳಲ್ಲಿ ಈ ರೈಲು ನಿಲ್ದಾಣದ ಕಟ್ಟಡ ಒಡೆದುಹಾಕಿ ಬ್ಲೂಪ್ರಿಂಟ್ ಸಿದ್ಧಪಡಿಸಿ ಟೆಂಡರ್ ಕರೆಯಲು ಸೂಚನೆ ಕೊಡಲಾಗುವುದು" ಎಂದು ರೈಲ್ವೆ ಹಾಗೂ ಜಲಶಕ್ತಿಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
"ರೈಲ್ವೆ ನಿಲ್ದಾಣವನ್ನು ಬಹಳಷ್ಟು ವರ್ಷಗಳಿಂದ ಆಧುನೀಕರಣ ಮಾಡಲಾಗುತ್ತದೆ ಎಂದು ಹೇಳುಲಾಗುತ್ತಿದೆ. ಇದೀಗ ಒಂದಷ್ಟು ಅನುದಾನವನ್ನು ನೀಡಲಾಗಿದೆ. 15 - 20 ದಿನಗಳೊಳಗೆ ಟೆಂಡರ್ ಕೊಡುವ ಕಾರ್ಯ ಆಗುತ್ತದೆ. ಪಾಲ್ಘಾಟ್ - ಕೊಂಕಣ್ - ಮೈಸೂರು ಈ ಮೂರು ರೈಲ್ವೆ ಇಲಾಖೆಗಳ ಮಧ್ಯೆ ಮಂಗಳೂರು ವಿಭಾಗ ಸಿಕ್ಕಿಹಾಕಿಕೊಂಡಿದೆ. ಆದ್ದರಿಂದ ಮೂರು ಇಲಾಖೆಯ ಜನರಲ್ ಮ್ಯಾನೇಜರ್, ಸಿಇಒ, ಐದಾರು ಟಿಆರ್‌ಎಫ್ಒದೊಂದಿಗೆ ನಾನು ಮಾತನಾಡುತ್ತೇನೆ. 10 ವರ್ಷಗಳಲ್ಲಿ ಪ್ರಧಾನಿ 40 ಸಾವಿರ ಕಿ.ಮೀ ಡಬಲ್ ಲೈನ್ ಮಾಡಿದ್ದಾರೆ. ಹೊಸ ಹೊಸ ಲೈನ್‌ಗಳು ಆಗುತ್ತಿದೆ. ಆರ್‌ಒಬಿ, ಆರ್‌ಯುಬಿ, ಲೆವೆಲ್ ಕ್ರಾಸಿಂಗ್‌ನಲ್ಲಿ ನಿರೀಕ್ಷಿಸಲಾಗದಷ್ಟು ಕೆಲಸಗಳು ಆಗುತ್ತಿದೆ. ಕರ್ನಾಟಕದ 59 ರೈಲ್ವೆ ನಿಲ್ದಾಣಗಳಲ್ಲಿ ಅಮೃತ್ ಭಾರತಿ, ಗತಿಶಕ್ತಿ ಮೂಲಕ ಕೆಲಸ ಮಾಡುತ್ತಿದ್ದೇವೆ. ನಾನು ಕೇಂದ್ರದ ರಾಜ್ಯ ರೈಲ್ವೇ ಮಂತ್ರಿಯಾದ ಬಳಿಕ ದೇಶದ ವಿವಿಧೆಡೆ ಸುತ್ತಾಡುತ್ತಿದ್ದೇನೆ" ಎಂದರು.
ನಗರ ಸುರಕ್ಷತೆಗಾಗಿ ಎನ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾದರಿಯಲ್ಲಿ ರೈಲ್ವೆ ಇಲಾಖೆಯಲ್ಲಿಯೇ ಪ್ರತ್ಯೇಕ ಪ್ರಾಕೃತಿಕ ವಿಕೋಪ ತಂಡವನ್ನು ಇರಿಸಲಾಗಿದೆ. ಅದಕ್ಕೆ ವಾರ್‌ರೂಂಗಳನ್ನು ಮಾಡಿದ್ದೇವೆ. ಈ ಬಾರಿ ಮಳೆ ಹೆಚ್ಚಾಗಿದ್ದು, ಎಲ್ಲೆಲ್ಲಾ ಅವಘಡಗಳು ಆಗಿದೆಯೋ ಅಲ್ಲೆಲ್ಲಾ ಸಮರೋಪಾದಿಯಲ್ಲಿ ಕೆಲಸ ಆಗುತ್ತಿದೆ. ಶಾಶ್ವತವಾದ ಪರಿಹಾರ ಮಾಡುವ ಕೆಲಸ ಮಾಡಲಾಗುತ್ತದೆ" ಎಂದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ "ವಂದೇ ಭಾರತ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಸಭೆಯಲ್ಲಿ ಪ್ರಸ್ತಾಪಿಸಿ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ" ಎಂದರು.