ರಾಯಚೂರು: ಬಾಡಿಗೆದಾರನೊಬ್ಬ ಮನೆಯ ಯಾಜಮಾನಿಯನ್ನೇ ಹತ್ಯೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶೋಭಾ ಪಾಟೀಲ್(63) ಕೊಲೆಯಾದವರು. ಶಿವು ಸ್ವಾಮಿ ಹತ್ಯೆಗೈದ ಆರೋಪಿಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
''ಕೊಲೆಗೀಡಾದ ಶೋಭಾ ಪಾಟೀಲ್ ಮೂಲತಃ ಉದಯನಗರ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಹೀಗಾಗಿ ತಾವು ವಾಸವಾಗಿದ್ದ ಉದಯನಗರದಲ್ಲಿನ ಮನೆಯ ಮಹಡಿ ಮೇಲೆ ಬಾಡಿಗೆಗಾಗಿ ಶಿವು ಸ್ವಾಮಿಗೆ ನೀಡಿದ್ದರು. ಆಗಾಗ ರಾಯಚೂರಿಗೆ ಬಂದು ಮನೆ ನೋಡಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಅಡ್ವಾನ್ಸ್ ಹಣದ ವಿಚಾರವಾಗಿ ತಕರಾರು ತೆಗೆದಿದ್ದರಿಂದ ಮಾಲೀಕರು ಶಿವು ಸ್ವಾಮಿಗೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಇದೇ ವಿಚಾರವಾಗಿ ಯಾಜಮಾನಿಯು ಮನೆಯಲ್ಲಿದ್ದಾಗ ಒಳನುಗ್ಗಿದ ಶಿವು ಸ್ವಾಮಿ ಉಸಿರುಗಟ್ಟಿಸಿ ವೃದ್ಧೆಯನ್ನು ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿ ತಾನೇ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾನೆ. ಹೃದಯ ಸಂಬಂಧಿ ಖಾಯಿಲೆ ಇದ್ದು, ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ತಿಳಿದು ಕುಟುಂಬಸ್ಥರು ಸುಮ್ಮನಾಗಿದ್ದರು. ಆದರೆ, ಮೃತ ಶೋಭಾ ಅವರ ಮೈಮೇಲಿದ್ದ ಚಿನ್ನಾಭರಣ ಕಾಣೆಯಾಗಿದ್ದರಿಂದ ಅನುಮಾನಗೊಂಡು ಕುಟುಂಬಸ್ಥರು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ಬಾಡಿಗೆ ವಾಸವಿದ್ದ ಶಿವು ಸ್ವಾಮಿ ಮೇಲೆ ಅನುಮಾನ ವ್ಯಕ್ತವಾಗಿತ್ತು. ಕರೆದು ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.