ಕರ್ನಾಟಕ

karnataka

ETV Bharat / state

ಬೆಂಗಳೂರು: ಆನ್​ಲೈನ್​ ಹೂಡಿಕೆ ಹೆಸರಿನಲ್ಲಿ ₹88 ಲಕ್ಷ ವಂಚಿಸಿದ್ದ 10 ಮಂದಿ ಸೆರೆ - ONLINE INVESTMENT FRAUD

ವ್ಯಕ್ತಿಗೆ 88 ಲಕ್ಷ ರೂ. ವಂಚನೆ ಮಾಡಿದ್ದ ಸೈಬರ್ ಖದೀಮರನ್ನು ಬೆಂಗಳೂರಿನ ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : 6 hours ago

ಬೆಂಗಳೂರು:ಮಹಾಲಕ್ಷ್ಮಿ ಲೇಔಟ್‌ನ ವ್ಯಕ್ತಿಯೊಬ್ಬರಿಗೆ 88 ಲಕ್ಷ ರೂ. ವಂಚಿಸಿದ್ದ 10 ಮಂದಿ ಸೈಬರ್ ಖದೀಮರನ್ನು ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾಗಿದ್ದ ವ್ಯಕ್ತಿಯ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆಕಾಶ್, ರವಿಶಂಕರ್, ಪ್ರಕಾಶ್, ಪ್ರಜ್ವಲ್, ಸುನಿಲ್, ಸುರೇಶ್, ಓಬಳ ರೆಡ್ಡಿ, ಮಧುಸೂಧನ್, ಶ್ರೀನಿವಾಸ್ ರೆಡ್ಡಿ ಹಾಗೂ ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 51 ಮೊಬೈಲ್​ಗಳು, 27 ಡೆಬಿಟ್ ಕಾರ್ಡ್​ಗಳು, 108 ಬ್ಯಾಂಕ್ ಪಾಸ್​ಬುಕ್, 480 ಸಿಮ್ ಕಾರ್ಡ್​ಗಳು, 48 ಕ್ಯೂಆರ್ ಕೋಡ್, 42 ರಬ್ಬರ್ ಸ್ಟಾಂಪ್​ಗಳು, 103 ಉದ್ಯಮ್ ಹಾಗೂ ಜೆಎಸ್​ಟಿ ದಾಖಲಾತಿಗಳು ಹಾಗೂ ಚಾಲ್ತಿಯಿರುವ 230 ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದರು.

ವಂಚಕರು ಫೇಸ್​ಬುಕ್, ಟೆಲಿಗ್ರಾಮ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೂಲಕ ಷೇರು ಹೂಡಿಕೆಗೆ ಸಂಬಂಧಿಸಿದ ಜಾಹೀರಾತಿನ ಲಿಂಕ್ ಕಳುಹಿಸಿ, ಇಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಮಾಡಿಕೊಡುವುದಾಗಿ ಆಮಿಷವೊಡ್ಡುತ್ತಿದ್ದರು. ಹಣದಾಸೆಗೆ ಲಿಂಕ್‌ ಒತ್ತಿದರೆ ವಿವಿಧ ಕಂಪನಿಗಳ ಹೆಸರಿನಲ್ಲಿ ವಾಟ್ಸ್​ಆ್ಯಪ್​ ಗ್ರೂಪ್ ಪೇಜ್​ಗಳು ತೆರೆಯುತ್ತಿದ್ದವು. 'ಬ್ರ್ಯಾಂಡಿ ಸ್ಪಿಡ್' ಎಂಬ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಚಂದದಾರರಾದರೇ ಹೆಚ್ಚು ಆದಾಯಗಳಿಸಬಹುದೆಂದು ನಂಬಿಸಿ ವ್ಯಕ್ತಿಯೋರ್ವರಿಂದ ಹಂತ-ಹಂತವಾಗಿ 88.83 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆರೋಪಿಗಳ ವಂಚನೆ ಜಾಲ ಬೆಳಕಿಗೆ ಬಂದಿದೆ.

ವಶಕ್ಕೆ ಪಡೆದ ವಸ್ತುಗಳು (ETV Bharat)

ದುಬೈ ಹಾಗೂ ಹಾಂಕಾಂಗ್ ಸೇರಿದಂತೆ‌ ದೂರದ ದೇಶಗಳಿಂದಲೇ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕಿಂಗ್​ಪಿನ್​ಗಳು ಬಂಧಿತರನ್ನು ಸಂಪರ್ಕಿಸುತ್ತಿದ್ದರು. ಒಂದು ಬ್ಯಾಂಕ್ ಖಾತೆ ಸೃಷ್ಟಿಸಿ ಸಂಪೂರ್ಣ ವಿವರಗಳನ್ನು ನೀಡಿದರೆ 5ರಿಂದ 10 ಸಾವಿರ ಕಮಿಷನ್​ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ಹಣದಾಸೆಗೆ ಒಳಗಾದ ಆಕಾಶ್, ರವಿಶಂಕರ್, ಸುನಿಲ್, ಪ್ರಜ್ವಲ್​ ಪ್ರಕಾಶ್ ಸಾರ್ವಜನಿಕರನ್ನು ಸಂಪರ್ಕಿಸಿ ಹೂಡಿಕೆ ನೆಪದಲ್ಲಿ ಅವರ ಬ್ಯಾಂಕ್ ಖಾತೆಗಳನ್ನ ಸಂಗ್ರಹಿಸಿ ತಲೆಮರೆಸಿಕೊಂಡಿರುವ ಕಿಂಗ್​ಪಿನ್​ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

1,467 ದೂರುಗಳು ದಾಖಲು:ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳ ವಿವರ ಪಡೆದು ಸಾಮಾಜಿಕ‌ ಜಾಲತಾಣದ ಮೂಲಕ ಜಾಹೀರಾತು ಲಿಂಕ್‌ ಕಳುಹಿಸಿ ಹಣ ಹೂಡಿದರೆ ಹೆಚ್ಚು ಹಣ ಸಂಪಾದಿಸಬಹುದೆಂದು ನಂಬಿಸಿ ದೇಶದೆಲ್ಲೆಡೆ ವಂಚಿಸುತ್ತಿದ್ದು, ಈ ಸಂಬಂಧ ಎನ್​ಸಿಆರ್​ಪಿ ಪೋರ್ಟಲ್​ನಲ್ಲಿ 1,467 ದೂರುಗಳು ದಾಖಲಾಗಿವೆ. ನಗರದ ಉತ್ತರ ವಿಭಾಗದ ಸೆನ್‌ ಪೊಲೀಸ್ ಠಾಣೆಯಲ್ಲಿ 15 ಪ್ರಕರಣ ದಾಖಲಾಗಿವೆ. ಸದ್ಯ 10 ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗೆ ಸೋಪು, ಬೇಳೆ ಪ್ಯಾಕೆಟ್​ಗಳಲ್ಲಿ ಡ್ರಗ್ಸ್ ಸಾಗಣೆ: ₹24 ಕೋಟಿಯ ಎಂಡಿಎಂಎ ವಶ, ವಿದೇಶಿ ಮಹಿಳೆ ಅರೆಸ್ಟ್

ABOUT THE AUTHOR

...view details