ಕರ್ನಾಟಕ

karnataka

ETV Bharat / state

ಪಶ್ಚಿಮ ಘಟ್ಟದಲ್ಲಿ ಭೂ ಪರಿವರ್ತನೆಗೆ ತಾತ್ಕಾಲಿಕ ತಡೆ: ಸಚಿವ ಈಶ್ವರ್ ಖಂಡ್ರೆ - Western Ghats Lands Conversion

ಕರ್ನಾಟಕ, ಕೇರಳ ಸೇರಿದಂತೆ ಪಶ್ಚಿಮ ಘಟ್ಟಗಳ ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಚಿವ ಈಶ್ವರ್ ಖಂಡ್ರೆ, ಸಂಭಾವ್ಯ ಅವಘಡ ತಡೆಯಲು ಈ ಪ್ರದೇಶದಲ್ಲಿ ಒತ್ತುವರಿ ತೆರವಿಗೆ ಕ್ರಮವಹಿಸಲಾಗಿದೆ ಎಂದರು.

By ETV Bharat Karnataka Team

Published : Aug 16, 2024, 6:02 PM IST

ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ (ETV Bharat)

ಬೆಂಗಳೂರು: ಹಲವು ನದಿಗಳ ಮೂಲ ಮತ್ತು ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಈ ವ್ಯಾಪ್ತಿಯ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವವರೆಗೆ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ, ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅಧಿಸೂಚನೆ ಮಾಡಿರುವ ಕಸ್ತೂರಿ ರಂಗನ್ ವರದಿಯ ಕುರಿತಂತೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ, ಕೇರಳ ಸೇರಿದಂತೆ ಪಶ್ಚಿಮ ಘಟ್ಟದ ಹಲವೆಡೆ, ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಕೊಡಗಿನ ಭೂಕುಸಿತ ಪ್ರಕರಣಗಳ ಅಧ್ಯಯನದಲ್ಲಿ ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳೇ ಪ್ರಾಥಮಿಕ ಕಾರಣ ಎನ್ನಲಾಗಿದ್ದು, ಪಶ್ಚಿಮ ಘಟ್ಟದಲ್ಲಿ ಸಂಭಾವ್ಯ ಅವಗಢ ತಡೆಯಲು ಮುಂಜಾಗರೂಕತಾ ಕ್ರಮವಾಗಿ ಈ ಪ್ರದೇಶದ ಒತ್ತುವರಿ ತೆರವಿಗೆ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ.

ಹಿಮಾಲಯದ ಕಣಿವೆ ರಾಜ್ಯ ಹಿಮಾಚಲ ಪ್ರದೇಶದ ಘಟ್ಟ ಪ್ರದೇಶಗಳಲ್ಲಿ ಭೂ ಪರಿವರ್ತನೆ ಮತ್ತು ಕಟ್ಟಡ ನಿರ್ಮಾಣಕ್ಕೆ ನಿರ್ದಿಷ್ಟವಾದ ಹಾಗೂ ಪ್ರತ್ಯೇಕವಾದ ನಿಯಮಗಳನ್ನು ರೂಪಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿರುವ ಸಚಿವರು, ಪಶ್ಚಿಮ ಘಟ್ಟ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಭೂ ಉಪಯೋಗದ ರೀತಿ ಮತ್ತು ಭೂ ಪರಿವರ್ತನೆಯೂ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ, ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯದಲ್ಲಿ ಭೂ ಉಪಯೋಗ ಸ್ವರೂಪ ಕುರಿತಂತೆ ಹೊಸ ಪ್ರಾದೇಶಿಕ ನಿಯಂತ್ರಣ ಮತ್ತು ಮಾಸ್ಟರ್ ಯೋಜನೆ (Zonal Regulation And Master Plan On Land Use Pattern) ರೂಪಿಸುವವರೆಗೆ ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳಪಡುವ ಎಲ್ಲಾ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ಸೂಕ್ತವಾಗಿದ್ದು, ಕೂಡಲೇ ಕ್ರಮವಹಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಸಾರ್ವಜನಿಕ ಮಹತ್ವದ ಯೋಜನೆಗೆ ಮಾತ್ರ ಸಮ್ಮತಿ:ಅತೀ ಜರೂರಾದ, ಸಾರ್ವಜನಿಕ ಮಹತ್ವದ ಪ್ರಕರಣಗಳಲ್ಲಿ ಮಾತ್ರ ಯೋಜನೆಗೆ ಪರಿಸರ ಸಮ್ಮತಿ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಸಮಿತಿಯ ಉನ್ನತಾಧಿಕಾರ ಸಮಿತಿ ಸಭೆಯ ಅನುಮೋದನೆ ನಂತರವಷ್ಟೇ ನೀಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಭೂ ಉಪಯೋಗ ಕುರಿತಂತೆ ಹೊಸ ನಿಯಮಾವಳಿ ರೂಪಿಸಲು ಪ್ರಸ್ತಾವನೆಯನ್ನು ಕಡತದಲ್ಲಿ ಮಂಡಿಸುವಂತೆಯೂ ಅವರು ಅಪರ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಕಾಳಿ ನದಿಯಿಂದ ಮೇಲೆ ಬಂದ ಲಾರಿ: ಯಶಸ್ವಿ ಕಾರ್ಯಾಚರಣೆ ಹಿಂದಿದೆ ಹಲವರ ಸಾಹಸ - Lorry Lifted From River

ABOUT THE AUTHOR

...view details