ಬೆಂಗಳೂರು: ಯಾರೆಲ್ಲಾ ಇನ್ನೂ ತಮ್ಮ ವಾಹನಗಳಿಗೆ ಹೆಚ್.ಎಸ್.ಆರ್.ಪಿ ಅಳವಡಿಸಿಲ್ಲವೂ ಅವರಿಗೆ ಹೈಕೋರ್ಟ್ ಮತ್ತೊಂದು ಅವಕಾಶ ನೀಡಿದ್ದು, ನವೆಂಬರ್ 20 ರವರೆಗೂ ಕಾಲಾವಕಾಶ ಕಲ್ಪಿಸಿದೆ. ಹೆಚ್.ಎಸ್.ಆರ್.ಪಿ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಅತಿಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್‌ಪಿ) ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರ ಅಳವಡಿಸಬೇಕು ಎಂಬುದಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ
ಪ್ರತಿವಾದಿಗಳ ಪರ ವಕೀಲರು ಅರ್ಜಿಯನ್ನು ನವೆಂಬರ್‌ಗೆ ಮುಂದೂಡುವಂತೆ ಕೋರಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಹಿರಿಯ ವಕೀಲ ದೇವದತ್ ಕಾಮತ್ ಅವರು ವಿಚಾರಣೆಯನ್ನು ನವೆಂಬರ್ 20ಕ್ಕೆ ನಿಗದಿಗೊಳಿಸುವಂತೆ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯ ಪೀಠ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿತು. ಅಲ್ಲಿಯವರೆಗೂ ವಾಹನ ಮಾಲೀಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದರು.
ಮುಂದಿನ ವಿಚಾರಣೆವರೆಗೂ ದಂಡದ ಕ್ರಮ ಇಲ್ಲ:ಸೆಪ್ಟಂಬರ್ 15 ಕ್ಕೆ ಸರ್ಕಾರದ ಗಡುವು ಮುಗಿದಿದ್ದರೂ ಹೈಕೋರ್ಟ್ ಇಂದು ನೀಡುವ ಆದೇಶವನ್ನು ಆಧರಿಸಿ ಹೆಚ್‌ಎಸ್‌ಆರ್ ಫಲಕ ಅಳವಡಿಸಿಕೊಳ್ಳದ ವಾಹನಗಳ ಮಾಲೀಕರಿಗೆ ದಂಡ ವಿಧಿಸುವ ಕುರಿತು ತೀರ್ಮಾನಿಸಲು ಸಾರಿಗೆ ಇಲಾಖೆ ನಿರ್ಧರಿಸಿತ್ತು, ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗು ಸಾರಿಗೆ ಆಯುಕ್ತರು ಮಾಹಿತಿಯನ್ನೂ ನೀಡಿದ್ದರು ಈಗ ವಿಚಾರಣೆ ಮುಂದೂಡಿಕೆಯಾಗಿರುವುದರಿಂದ ಮತ್ತು ಅಲ್ಲಿಯವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿರುವ ನಿರ್ದೇಶನದ ಹಿನ್ನಲೆಯಲ್ಲಿ ಸದ್ಯಕ್ಕೆ ಮುಂದಿನ ವಿಚಾರಣೆವರೆಗೂ ದಂಡದಂತಹ ಕ್ರಮ ಇರುವುದಿಲ್ಲ.
ಮೇಲ್ಮನವಿ ಸಲ್ಲಿಸಿರುವವರು ಯಾರು?:ಗುಜರಾತ್‌ನ ಸೂರತ್ ಮೂಲದ ಬಿಎನ್‌ಡಿ ಎನರ್ಜಿ ಪ್ರೈವೇಟ್ ಲಿಮಿಟೆಡ್, ಭಾರತದಲ್ಲಿ ಫಲಕ ಉತ್ಪಾದಕರ ನೋಂದಣೆ ಸಂಸ್ಥೆ, ಭಾರತೀಯ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರ ಸಂಸ್ಥೆಗಳು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠವು 20.9.2023ರಂದು ಸಾರಿಗೆ ಇಲಾಖೆಯ ಅಧಿಸೂಚನೆ ಮತ್ತು ಸುತ್ತೋಲೆಗೆ ತಡೆ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿವೆ.