ಶಿವಮೊಗ್ಗ:ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಅವರು ಬೆಂಗಳೂರಿನ ಲಾಡ್ಜ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನ್ಯಾಯಾಲಯದ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಜಕ್ಕಣ್ಣ ಗಾಂಧಿನಗರ ಬಳಿಯ ಲಾಡ್ಜ್ವೊಂದರಲ್ಲಿ ತಂಗಿದ್ದರು.
ಬುಧವಾರ ಮಧ್ಯಾಹ್ನದಿಂದ ಕುಟುಂಬದವರು ಹಾಗೂ ಅಧಿಕಾರಿಗಳ ಫೋನ್ ಕರೆಗೆ ಸಿಗದ ಕಾರಣ, ಬಳಿಕ ಪೊಲೀಸರು ಹುಡುಕಾಟ ನಡೆಸಿದ್ದರು. ಮೊಬೈಲ್ ಲೊಕೇಷನ್ ಚೆಕ್ ಮಾಡಿದಾಗ ಲಾಡ್ಜ್ನಲ್ಲಿ ಇರುವ ಕುರಿತು ಮಾಹಿತಿ ಲಭ್ಯವಾಗಿತ್ತು.
ಬಳಿಕ ಲಾಡ್ಜ್ನ ರೂಂಗೆ ಹೋಗಿ ನೋಡಿದಾಗ ಜಕ್ಕಣ್ಣ ಗೌಡರ್ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಅವರ ಶವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಗುರುವಾರ ಅವರ ಮೃತದೇಹವನ್ನು ಹುಟ್ಟೂರು ಗದಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದುಬಂದಿದೆ.