ಬೆಂಗಳೂರು: ಬಲೂನ್ಗೆ ಬಳಸುವ ಹೀಲಿಯಂ ಅನಿಲ ಸೇವಿಸಿ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾಸನದ ಸಕಲೇಶಪುರ ಮೂಲದ ಎಸ್.ಯಾಜ್ನಿಕ್ (24) ಮೃತ ಯುವಕ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯಾಜ್ನಿಕ್, ಕಳೆದ ನಾಲ್ಕು ವರ್ಷಗಳಿಂದ ಮನೆಯಿಂದ ಕೆಲಸ ಮಾಡುತ್ತಿದ್ದ. ಪರಿಸ್ಥಿತಿಗೆ ಅನುಗುಣವಾಗಿ 15 ಅಥವಾ ತಿಂಗಳಿಗೊಮ್ಮೆ ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಕಂಪೆನಿಯ ಕಚೇರಿಗೆ ಭೇಟಿ ನೀಡುತ್ತಿದ್ದ. ಎಂಟೆಕ್ ಪರೀಕ್ಷೆ ಬರೆಯುವುದಾಗಿ ಹೇಳಿ ಆಗಸ್ಟ್ 16ರಂದು ಬೆಳಗ್ಗೆ ನಗರಕ್ಕೆ ಬಂದಿದ್ದ. ನೀಲಾದ್ರಿ ರಸ್ತೆಯಲ್ಲಿರುವ ಹೋಟೆಲ್ನ ಕೊಠಡಿಯಲ್ಲಿ ಉಳಿದುಕೊಂಡಿದ್ದನು.