ಬೆಂಗಳೂರು: ತೆರಿಗೆ ಹೆಚ್ಚು ಸಂಗ್ರಹಿಸಿದರೆ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಹೆಚ್ಚು ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿ.ಎಸ್.ಟಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ 2024-25 ನೇ ಸಾಲಿನ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಜಾ ಸರ್ಕಾರಕ್ಕೂ ಮುನ್ನ ರಾಜರ ಕಾಲದಿಂದಲೂ ತೆರಿಗೆ ಪದ್ಧತಿ ಇತ್ತು ಎನ್ನುವುದನ್ನು ಅನೇಕ ಶಾಸನಗಳಲ್ಲಿ ನಾವು ಕಾಣಬಹುದು. ಕದಂಬರು ಕರ್ನಾಟಕದಲ್ಲಿ ಮಾರಾಟ ತೆರಿಗೆಯನ್ನು ಪ್ರಾರಂಭಿಸಿದರು ಎಂದು ಶಾಸನಗಳು ಹೇಳುತ್ತವೆ. ರಾಜ್ಯ ನಡೆಸಲು ತೆರಿಗೆ ಅಗತ್ಯ. ತೆರಿಗೆ ಕೊಡಲು ಸಾಧ್ಯವಿದ್ದವರು ಮಾತ್ರ ತೆರಿಗೆಯನ್ನು ಕೊಡುತ್ತಾರೆ. ಪ್ರತಿ ಸರ್ಕಾರವೂ ಕೂಡ ತೆರಿಗೆ ಸಂಗ್ರಹ ಮಾಡಿಯೇ ದೇಶವನ್ನು, ರಾಜ್ಯವನ್ನು ನಡೆಸುತ್ತದೆ. ಸಂವಿಧಾನ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಕೊಟ್ಟಿದೆ ಎಂದು ತಿಳಿಸಿದರು.
ರಾಜ್ಯಗಳಿಗೆ ಸೂಕ್ತ ರೀತಿಯಲ್ಲಿ ತೆರಿಗೆ ಹಂಚಿಕೆಯಾಗಬೇಕು:ಕರ್ನಾಟಕ ಸರ್ಕಾರ ಜಿಎಸ್ಟಿಗೂ ಮುನ್ನವೇ ವ್ಯಾಟ್ ಮೂಲಕ ತೆರಿಗೆ ವಸೂಲು ಮಾಡುತ್ತಿತ್ತು. ಜಿಎಸ್ಟಿ ಪರೋಕ್ಷ ತೆರಿಗೆಯಾಗಿದೆ. ಕೇಂದ್ರದಿಂದ ರಾಜ್ಯಗಳಿಗೆ ಸರಿಯಾಗಿ ತೆರಿಗೆ ಪಾಲು ದೊರೆಯುತ್ತಿಲ್ಲ ಎಂಬ ಕೂಗು ಎದ್ದಿದೆ. ಪ್ರಸ್ತುತ 16ನೇ ಹಣಕಾಸು ಆಯೋಗ ರಚನೆಯಾಗುತ್ತಿದೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳಿಗೆ ಸೂಕ್ತ ರೀತಿಯಲ್ಲಿ ತೆರಿಗೆ ಹಂಚಿಕೆಯಾಗಬೇಕೆಂದು ನಾವು ಪ್ರತಿಪಾದಿಸುತ್ತಿದ್ದೇವೆ. 15ನೇ ಹಣಕಾಸು ಯೋಜನೆಯಡಿ ರಾಜ್ಯ ಸರ್ಕಾರಕ್ಕೆ ಶೇ.1.7 ರಷ್ಟು ತೆರಿಗೆ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ, ಸಂಸದರು ಹಾಗೂ ಪ್ರಧಾನಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ. ಹೆಚ್ಚು ತೆರಿಗೆ ಸಂಗ್ರಹವಾದರೆ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಬಳಿ ಫೋನೇ ಇಲ್ವಂತೆ!: ಕಾರಣವೇನು ಗೊತ್ತಾ? - cm siddaramaiah not having mobile