ಮೈಸೂರು: ಎಸ್‌ಇಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿ ಕೊರೆಸಲಾದ ಕೊಳವೆ ಬಾವಿಗಳ ವಿದ್ಯುದೀಕರಣ ಪೂರ್ಣಗೊಳಿಸದೇ ಇರುವಂತಹ 20 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಮೈಸೂರಿನ ಜಲದರ್ಶಿನಿ ಸಭಾಂಗಣದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೈಸೂರು ವೃತ್ತದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವರು ಮಾತನಾಡಿದರು.
ನಬಾರ್ಡ್, ಎಸ್‌ಡಿಆರ್‌ಎಫ್ ಮತ್ತು ಆಯವ್ಯಯದಲ್ಲಿ ಘೋಷಣೆ ಮಾಡಲಾದ ಯೋಜನೆಗಳ ಅನುಷ್ಠಾನ ಹಾಗೂ ಅವುಗಳ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದ ಅವರು, ಚುನಾವಣೆಯ ಕಾರಣ ನೀಡಿ ಹಲವಾರು ಯೋಜನೆಗಳ ಟೆಂಡರ್ ಪ್ರಕ್ರಿಯೆ ನಿಧಾನಗೊಳಿಸಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ವಿಶೇಷ ಘಟಕ ಯೋಜನೆ ಅಡಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಹಲವಾರು ಕಡೆಗಳಲ್ಲಿನ ಬೋರ್‌ವೆಲ್‌ಗಳನ್ನು ಗುತ್ತಿಗೆದಾರರು ವಿದ್ಯುದೀಕರಣಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿಲ್ಲ. ಕೆಲವು ಪ್ರಕರಣಗಳಲ್ಲಿ ಮೂರು ವರ್ಷಗಳಿಂದ ಈ ಕಾರ್ಯವನ್ನ ಬಾಕಿ ಉಳಿಸಿಕೊಳ್ಳಲಾಗಿದೆ. ಇದನ್ನು ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೈಗೊಳ್ಳಬೇಕಾಗಿದ್ದ 7 ಕೆರೆ ತುಂಬಿಸುವ ಯೋಜನೆಗೆ ಮಾರ್ಚ 2022 ರಲ್ಲಿ ಟೆಂಡರ್ ಪ್ರಕ್ರಿಯೆ ಪೂರೈಸಿ ಕರಾರು ಪತ್ರವನ್ನು ಮಾಡಿಕೊಡಲಾಗಿತ್ತು. ಇದುವರೆಗೂ ಕಾಮಗಾರಿ ಪ್ರಾರಂಭಿಸಲ್ಲ. ಕಾಮಗಾರಿ ಪ್ರಾರಂಭಿಸುವಂತೆ ಹಲವಾರು ಬಾರಿ ಗುತ್ತಿಗೆದಾರರಿಗೆ ನೋಟೀಸ್ ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಅಯ್ಯಪ್ಪ ಕನ್‌ಸ್ಟ್ರಕ್ಷನ್ ಅವರಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಯಾವುದೇ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಇದನ್ನು ಪೂರ್ಣಗೊಳಿಸದೇ ಬೇರೆ ಪ್ರಕ್ರಿಯೆ ಪ್ರಾರಂಭಿಸಿದರೆ ಬಹಳಷ್ಟು ತೊಂದರೆಗಳೂ ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಆದ್ಯತೆ ನೀಡಬೇಕು. ಕೆರೆಗಳನ್ನ ಸುಸ್ಥಿತಿಯಲ್ಲಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಮಳೆ ನೀರು ಹೆಚ್ಚಾಗಿ ಸಂಗ್ರಹವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೇ, ಮುಗಿದಿರುವ ಕಾಮಗಾರಿಗಳ ವರದಿಯನ್ನು ಸಕಾಲಕ್ಕೆ ಸಲ್ಲಿಸಬೇಕು. ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸಗಳನ್ನ ಚುರುಕುಗೊಳಿಸಿ ಎಂದು ಸೂಚನೆ ನೀಡಿದರು.
ಮುಡಾ ವಿಚಾರದಲ್ಲಿ ಬಿಜೆಪಿ ನಾಯಕರಿಂದ ರಾಜಕೀಯ: ಮೂಡಾ ಸೈಟ್ ಹಂಚಿಕೆ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮುಡಾ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ಬದಲಾಗಿ ಸೈಟ್ ಹಂಚಿಕೆ ಮಾಡಿದ್ದಾರೆ. ಬಿಜೆಪಿ ನಾಯಕರು ಈ ವಿಷಯದಲ್ಲಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಜೆಡಿಎಸ್ ಪಕ್ಷದ ಮೇಲೆ ಅವಲಂಬಿತರಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ಡಿಕೆ ಜನತಾ ದರ್ಶನ; ಅಧಿಕಾರಿಗಳಿಗೆ ನಿರ್ಬಂಧ - Janata Darshana in Mandya