ದಾವಣಗೆರೆ: ಅದು ಪ್ರಪಂಚವನ್ನೇ ನೋಡದ ಶಿಶು. ದುರಂತ ಎಂದರೆ ಈ ಪ್ರಪಂಚಕ್ಕೆ ಬರುವ ಮುನ್ನವೇ ಕಣ್ಮುಚ್ಚಿದೆ. ಸಿಸೇರಿಯನ್ ಮಾಡಿ ಮಗು ಹೊರ ತೆಗೆಯುವ ವೇಳೆ ಆದ ತಪ್ಪಿನಿಂದ ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ದಾವಣಗೆರೆ ಚಿಗಟೇರಿ ಹೆರಿಗೆ ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡುವ ವೇಳೆ ಮಗುವಿನ ರೆಕ್ಟಂ (ಗುದದ್ವಾರ) ಕ್ಕೆ ಕತ್ತರಿ ಬಿದ್ದು, ನವಜಾತ ಶಿಶು ಸಾವನಪ್ಪಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಪ್ರಾಣ ಉಳಿಸುವ ವೈದ್ಯನಿಗೆ 'ವೈದ್ಯ ನಾರಾಯಣ ಹರಿ' ಎನ್ನುತ್ತಾರೆ. ಆದರೆ ದಾವಣಗೆರೆಯಲ್ಲಿ ಮಾತ್ರ ಅದೇ ವೈದ್ಯರ ತಪ್ಪಿನಿಂದಾಗಿ ಪುಟ್ಟ ಕಂದಮ್ಮ ಕಣ್ಣು ಬಿಡುವ ಮುನ್ನವೇ ಉಸಿರು ಚೆಲ್ಲಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಕ್ಟರ್ ಸಿಸೇರಿಯನ್ ಮಾಡುವ ವೇಳೆ ಮಗುವಿನ ರೆಕ್ಟಂ (ಗುದದ್ವಾರ) ವನ್ನು ಕೊಯ್ದಿದ್ದರಿಂದ ಹೆಣ್ಣು ಮಗು ಕೊನೆಯುಸಿರೆಳೆದಿದೆ ಎಂದು ಅರ್ಜುನ್ ಹಾಗೂ ಅಮೃತಾ ದಂಪತಿ ಆರೋಪ ಮಾಡಿದ್ದಾರೆ.
ವೈದ್ಯರ ವಿರುದ್ಧ ದೂರು ನೀಡಲು ದಂಪತಿ ಸಿದ್ಧತೆ ನಡೆಸಿದ್ದಾರೆ. ತಮಗೆ ಮಗು ಬೇಕೇ ಬೇಕೆಂದು ಪಟ್ಟು ಹಿಡಿದು ಆಸ್ಪತ್ರೆ ಮುಂದೆ ಪ್ರತಿಭಟನೆ ಕೂಡ ಮಾಡಿದ್ದಾರೆ. ಸ್ಥಳ್ಳಕ್ಕೆ ಆಗಮಿಸಿದ ಚಿಗಟೇರಿ ಜಿಲ್ಲಾಸ್ಪತ್ರೆ ಡಿಎಸ್ ಡಾ. ನಾಗೇಂದ್ರಪ್ಪ ಅವರು ವೈದ್ಯನ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಮಗು ಕಳೆದುಕೊಂಡ ತಾಯಿಯ ಆರೋಪವಿದು: "ವೈದ್ಯರು ಸಿಸೇರಿಯನ್ ಮಾಡಿದ್ದಾರೆ. ರೆಕ್ಟಂ (ಗುದದ್ವಾರ)ಗೆ ಬ್ಲೇಡ್ ಹಾಕಿದಕ್ಕಾಗಿಯೇ ಪಾಪು ಸಾವನ್ನಪ್ಪಿದೆ. ಮಗುವಿಗೆ ಬ್ಲೇಡ್ ಹಾಕಿ ಹೊಲಿಗೆ ಹಾಕಿಸಿಕೊಂಡು ಬನ್ನಿ ಎಂದು ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ರು. ಅಲ್ಲಿಯ ವೈದ್ಯರು ನರ ಕಟ್ ಆಗಿದೆ ಎಂದು ಹೇಳಿ ಕಳಿಸಿದ ಮೇಲೆ ನಮಗೆ ಇದು ಗೊತ್ತಾಗಿದೆ. ಕಳೆದ ದಿನ ಪಾಪು ಚೆನ್ನಾಗಿತ್ತು ಎಂದು ಹೇಳ್ತಿದ್ದರು. ಇವಾಗ ಪಾಪು ಇಲ್ಲ ಎನ್ನುತ್ತಿದ್ದಾರೆ" ಎಂದು ತಾಯಿ ಅಮೃತಾ ಅಳಲು ತೋಡಿಕೊಂಡಿದ್ದಾರೆ.
ನಡೆದಿದ್ದೇನು?: ದಾವಣಗೆರೆ ಕೊಂಡಜ್ಜಿ ರಸ್ತೆ ಬಳಿಯ ವಿನಾಯಕ ನಗರದ ನಿವಾಸಿ ಅರ್ಜುನ್ ಪತ್ನಿ ಅಮೃತಾ ಹೆರಿಗೆಗಾಗಿಯೇ ಜೂನ್ 26 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜೂನ್ 27 ರಂದು ಸಿಸೇರಿಯನ್ ಮಾಡಿ ವೈದ್ಯರು ಈ ಮಿಸ್ಟೆಕ್ ಮಾಡಿದ್ದಾರೆ ಎಂದು ಮೃತ ಶಿಶುವಿನ ಪೋಷಕರು ಆರೋಪ ಮಾಡಿದ್ದಾರೆ.
ಹೆರಿಗೆ ಮಾಡುವ ವೇಳೆ ಹೊಟ್ಟೆಯಲ್ಲಿದ್ದ ಮಗುವಿನ ರೆಕ್ಟಂ (ಗುದದ್ವಾರ) ಕೊಯ್ದಿದ್ದು, ರಕ್ತಸ್ರಾವ ಆದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಮಗುವನ್ನ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸತತ ಪ್ರಯತ್ನ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಗು ಸಾವನಪ್ಪಿದೆ. ಮಗುವಿನ ಸಾವಿಗೆ ವೈದ್ಯರು ಕಾರಣ ಅಂತ ಪೋಷಕರ ಆಕ್ರೋಶ ಹೊರಹಾಕಿದ್ರು. ಇಂದು ಜಿಲ್ಲಾಸ್ಪತ್ರೆ ಮುಂದೆ ಪೋಷಕರು ಪ್ರತಿಭಟನೆ ನಡೆಸಿ ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.
ಡಿಎಸ್ ಡಾ.ನಾಗೇಂದ್ರಪ್ಪ ಹೇಳಿದ್ದೇನು?: ಇನ್ನು ಚಿಗಟೇರಿ ಜಿಲ್ಲಾ ಹೆರಿಗೆ ಆಸ್ಪತ್ರೆಗೆ ಆಗಮಿಸಿದ ಡಿಎಸ್ ನಾಗೇಂದ್ರಪ್ಪ ಅವರು ಕೂಡ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು. "ಅಮೃತಾ ಎಂಬುವರಿಗೆ ಸಿಸೇರಿಯನ್ ಮಾಡುವ ವೇಳೆಯಲ್ಲಿ ಮಗುಗೆ ಗಾಯ ಆಗಿತ್ತು ಎಂದು ವರದಿಯಾಗಿದೆ. ಅದರಿಂದ ಎಬಿಆರ್ಕೆ ಅಡಿ ಮಗುವನ್ನು ಬಾಪೂಜಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಮಗುಗೆ ಇನ್ಫೆಕ್ಷನ್ ಆಗಿ ಸಾವನ್ನಪ್ಪಿದೆ. ತನಿಖೆ ಮಾಡಲು ವೈದ್ಯರ ತಂಡ ರಚಿಸಿ, ವೈದ್ಯನ ನಿರ್ಲಕ್ಷ್ಯತೆ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಕೆ ಮಾಡಿದ್ದೇವೆ. ತಪ್ಪಿತಸ್ಥ ವೈದ್ಯನ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ನುರಿತ ವೈದ್ಯರೇ ಈ ರೀತಿ ಮಾಡಿದ್ದು, ತನಿಖೆ ನಡೆದ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಡಿಎಸ್ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಓದಿ: ದಕ್ಷಿಣ ಕನ್ನಡ: ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ವಿಧಿವಶ - Kumble Sridhar Rao passed away