ಕರ್ನಾಟಕ

karnataka

ETV Bharat / state

ರಾಜ್ಯದ ಅತಿ ಎತ್ತರದ ಶ್ರೀರಾಮಾಂಜನೇಯ ಮೂರ್ತಿ ಉದ್ಘಾಟನೆ - RAMANJANEYA STATUE

ರಾಜ್ಯದ ಅತಿ ಎತ್ತರದ ಶ್ರೀರಾಮಾಂಜನೇಯ ಮೂರ್ತಿಯು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿದೆ. ಶಿವಮೊಗ್ಗದ ಯುವ ಶಿಲ್ಪಿಯ ಕೈಚಳಕದಲ್ಲಿ ಮೂರ್ತಿಯು ಅದ್ಭುತವಾಗಿ ಮೂಡಿಬಂದಿದೆ.

RAMANJANEYA STATUE
ಶ್ರೀರಾಮಾಂಜನೇಯ ಮೂರ್ತಿ ಉದ್ಘಾಟನೆ (ETV Bharat)

By ETV Bharat Karnataka Team

Published : Oct 23, 2024, 4:53 PM IST

ಬೆಂಗಳೂರು:ರಾಜಧಾನಿಯಲ್ಲಿ 63 ಅಡಿ ಎತ್ತರದ ಶ್ರೀರಾಮಾಂಜನೇಯ ಮೂರ್ತಿ ತಲೆಎತ್ತಿದೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಅದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸೌಮ್ಯನಾಥ ಸ್ವಾಮೀಜಿ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದರು.

ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ನಿರ್ಮಾಣಗೊಂಡಿರುವ ಕರ್ನಾಟಕದ ಅತಿ ಎತ್ತರದ ಶ್ರೀರಾಮಾಂಜನೇಯ ಪ್ರತಿಮೆ ಉದ್ಘಾಟನೆ ಬಳಿಕ ಮಾತನಾಡಿದ ಪ್ರಸನ್ನತೀರ್ಥ ಸ್ವಾಮೀಜಿ, ''ಭಕ್ತರೆಲ್ಲರೂ ಕೂಡಿಕೊಂಡು ಉತ್ತಮ ಕೆಲಸ ಮಾಡಿದ್ದೀರಿ. ದೇಶದಲ್ಲಿ ಶ್ರೀರಾಮ ರಾಜ್ಯ ನಿರ್ಮಾಣವಾಗಬೇಕು. ಪ್ರಭು ಶ್ರೀರಾಮ, ಆಂಜನೇಯ ದೇವರುಗಳಿಗೂ ಕರ್ನಾಟಕಕ್ಕೂ ಅವಿನಾಭಾವ ಇತಿಹಾಸವಿದೆ. ಶ್ರೀರಾಮನ ಆಡಳಿತ, ಗುಣ, ಮನಸ್ಸು, ಪಿತೃವಾಕ್ಯ ಪರಿಪಾಲನೆ, ಕುಟುಂಬ ಸಂಬಂಧಗಳೆಲ್ಲವೂ ಅವಿಸ್ಮರಣಿಯ. ಇದನ್ನು ಪ್ರತಿಯೊಬ್ಬರು ಆಳವಡಿಸಿಕೊಂಡರೆ, ಪ್ರತಿ ಕುಟುಂಬವೂ ನೆಮ್ಮದ್ಧಿ, ಶಾಂತಿಯಿಂದ ಬದುಕಬಹುದು'' ಎಂದರು.

ಶ್ರೀರಾಮಾಂಜನೇಯ ಮೂರ್ತಿ ಉದ್ಘಾಟನೆ (ETV Bharat)

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ''ಮನುಷ್ಯ ಮೌಲ್ಯಯುತವಾಗಿ ಬದುಕಲು ಮತ್ತು ಲೋಕದಲ್ಲಿ ಜನರು ಆದರ್ಶವಾಗಿ ಜೀವನ ಸಾಗಿಸಲು ಶ್ರೀರಾಮನ ಆದರ್ಶ ಆಳವಡಿಸಿಕೊಳ್ಳಿ. ಹಿಂದೂ ಸಮಾಜದ ಸಂರಕ್ಷಣೆ, ಸಂಘಟನೆ, ಒಗ್ಗಟ್ಟಿಗೆ ಧರ್ಮ ಕಾರ್ಯಗಳು ನಡೆಯುತ್ತಿರಬೇಕು. ಎಲ್ಲರಿಗೂ ಶ್ರೀರಾಮನ ಮೂರ್ತಿ ಸ್ಫೂರ್ತಿಯಾಗಿದೆ. ಪಿತೃವಾಕ್ಯ ಪರಿಪಾಲಕ, ಆದರ್ಶ ಪತಿ ಶ್ರೀರಾಮನನ್ನು ಮರ್ಯಾದಾ ಪುರಷೋತ್ತಮ ಎಂದು ಕರೆಯುತ್ತಾರೆ. ಅಂದರೆ, ಜೀವನದಲ್ಲಿ ಯುವಕರು ತಂದೆ, ತಾಯಿಗೆ ಉತ್ತಮ ಮಗನಾಗಿ, ಸತಿಗೆ ಉತ್ತಮ ಪತಿಯಾಗಿ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ಸಾಗಿಸಲು ಪ್ರಭು ಶ್ರೀರಾಮ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ'' ಎಂದು ಹೇಳಿದರು.

ಶಿಲ್ಪಿ ಜೀವನ್ ಕೈಚಳಕದಲ್ಲಿ ಅರಳಿದ ಶ್ರೀರಾಮಾಂಜನೇಯ:ಯುವ ಶಿಲ್ಪಿ ಜೀವನ್ ಶ್ರೀರಾಮಾಂಜನೇಯ ಮೂರ್ತಿಯನ್ನು ನಿರ್ಮಿಸಿದ್ದಾರೆ. ಶಿವಮೊಗ್ಗದ ಜೀವನ್ ಚಿಕ್ಕಂದಿನಿಂದಲೂ ಅದ್ಭುತ ಕಲಾವಿದರಾಗಿದ್ದು, ರಾಜ್ಯದ ವಿವಿಧೆಡೆ ನೂರಾರು ಪ್ರತಿಮೆ ಮತ್ತು ಮೂರ್ತಿಗಳನ್ನು ನಿರ್ಮಾಣ ಮಾಡಿದ್ದಾರೆ. ಬಳ್ಳಾರಿಯಲ್ಲಿ 23 ಅಡಿ ಎತ್ತರದ ರಾಜ್ಯದ ಅತಿಡೊಡ್ಡ ಡಾ. ಪುನೀತ್ ರಾಜ್​ಕುಮಾರ್ ಪ್ರತಿಮೆ, ಶಿಕಾರಿಪುರದಲ್ಲಿ 51 ಅಡಿ ಎತ್ತರದ ಜಗದ್ಗುರು ಶ್ರೀ ರೇಣುಕಾಚಾರ್ಯರ ಪ್ರತಿಮೆ ಮತ್ತು ಚನ್ನಪಟ್ಟಣ ಗೌಡಗೆರೆಯಲ್ಲಿ 62 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹಗಳ ನಿರ್ಮಾತೃ ಇವರಾಗಿದ್ದಾರೆ. ರಂಭಾಪುರಿ ಜಗದ್ಗುರುಗಳು ಜೀವನ್ ಅವರಿಗೆ ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಶ್ರೀರಾಮಾಂಜನೇಯ ಮೂರ್ತಿ ಉದ್ಘಾಟನೆ (ETV Bharat)

ಇದನ್ನೂ ಓದಿ:ಕಿತ್ತೂರು ಉತ್ಸವ-2024ಕ್ಕೆ ಅದ್ಧೂರಿ ಚಾಲನೆ: ಕಣ್ಮನ ಸೆಳೆದ ಕಲಾತಂಡಗಳು

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ, ಸಚಿವ ರಾಮಲಿಂಗಾರೆಡ್ಡಿ, ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಶ್ರೀರಾಮಸೇವಾ ಮಂಡಳಿ ಅಧ್ಯಕ್ಷ ಶ್ರೀಧರ್ ಇತರರು ಇದ್ದರು.

ಇದನ್ನೂ ಓದಿ:ದಾವಣಗೆರೆ: ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಪದವೀಧರ ಯುವತಿಯರು!

ABOUT THE AUTHOR

...view details