ವಿಧಾನಸಭೆ ಅಧಿವೇಶನದಲ್ಲಿ ಆರ್.ಅಶೋಕ್ ಮಾತು ಬೆಂಗಳೂರು: ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿದ ವಿಚಾರ ವಿಧಾನಸಭೆಯಲ್ಲಿ ಇಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುತ್ತಾ ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ಪ್ರತಿಭಟಿಸಿದಾಗ, ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ನನ್ನ ವಿರುದ್ಧ ಎಫ್‍ಐಆರ್ ಹಾಕಿದ್ದಾರೆ ಎಂದರು. ಇದಕ್ಕೆ ಸಚಿವ ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸುದ್ದಿಗೋಷ್ಠಿಯಲ್ಲಿ ನಾನು ಮಾತನಾಡಿದೆ ಎಂಬ ಕಾರಣಕ್ಕೆ ಸಿಐಡಿ, ಸಿಸಿಬಿ ಮೂರು ಬಾರಿ ನೋಟಿಸ್ ಕೊಟ್ಟು ನನ್ನನ್ನು ಕರೆಸಿದ್ದೀರಿ ಎಂದಾಗ, ಮಧ್ಯಪ್ರವೇಶಿಸಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಹಿತಿ ಕೊಡಲಿ ಎಂಬ ಉದ್ದೇಶಕ್ಕೆ ನಿಮಗೆ ನೋಟಿಸ್ ಕೊಡಲಾಗಿತ್ತು ಎಂದು ಸ್ಪಷ್ಟನೆ ನೀಡಿದರು. ಆಗ ಪ್ರಿಯಾಂಕ್ ಖರ್ಗೆ, ಮಟ್ಕಾ ದಂಧೆ ನಡೆಸುವ ವ್ಯಕ್ತಿಯನ್ನು ಬಿಜೆಪಿ ಮುಖಂಡ ಎಂದು ಹೇಳಿದರೆ ನಮ್ಮ ಅಭ್ಯಂತರವಿಲ್ಲ. ಆತನ ಮೇಲೆ 16 ಕೇಸುಗಳಿವೆ ಎಂದರು.
ಆಗ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಸಿದ್ಧು ಸವದಿ ಮೊದಲಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ, ಕಾವೇರಿದ ವಾತಾವರಣ ಉಂಟಾಯಿತು. ಮಾತು ಮುಂದುವರೆಸಿದ ಅಶೋಕ್, ಶ್ರೀಕಾಂತ್ ಪೂಜಾರಿ ಓರ್ವ ಹಿಂದೂ ಕಾರ್ಯಕರ್ತ. ಆದರೆ ಎಂ.ಬಿ.ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆ ಅವನೊಬ್ಬ ಕ್ರಿಮಿನಲ್ ಎಂದು ಹೇಳುತ್ತಿದ್ದಾರೆ. ಸುನಿಲ್ ಕುಮಾರ್ ಮೇಲೂ ಕೇಸಿದೆ ಹಾಗೂ ರಾಹುಲ್ ಗಾಂಧಿ ಅವರ ಮೇಲೂ ಕೇಸುಗಳಿವೆ ಎಂದಾಗ, ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.
ಸುನಿಲ್ ಕುಮಾರ್ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಕೇಸುಗಳಿಲ್ಲವೇ? ಹಾಗೆಂದ ಮಾತ್ರಕ್ಕೆ ಕ್ರಿಮಿನಲ್ ಎಂದು ಘೋಷಣೆ ಮಾಡಬಹುದೆ ಎಂದು ಪ್ರಶ್ನಿಸಿದರು. ರಾಷ್ಟ್ರಪತಿ ಬಗ್ಗೆ ಮುಖ್ಯಮಂತ್ರಿಗಳು ಏಕವಚನದಲ್ಲಿ ಮಾತನಾಡಿದ್ದಾರೆ. ಅಲ್ಲದೇ ರಾಮಮಂದಿರ ಉದ್ಘಾಟನೆಗೆ ಬರುವುದಿಲ್ಲ ಎಂದು ಹೇಳಿದ ಪಕ್ಷ ನಿಮಗೆ ಯಾವ ನೈತಿಕತೆ ಇದೆ ಎಂದು ಛೇಡಿಸಿದರು.
ಆಗ ಅಶೋಕ್ ಮಾತು ಮುಂದುವರೆಸಿ, ಪ್ರಿಯಾಂಕ್ ಖರ್ಗೆಯವರಿಗೆ ಮಾತನಾಡುವುದು ಚಟ. ರಾಷ್ಟ್ರಪತಿಯವರನ್ನು ಕರೆದು ರಾಮಮಂದಿರವನ್ನು ಉದ್ಘಾಟಿಸಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ರಾಮಮಂದಿರ ಟ್ರಸ್ಟ್ನವರು ರಾಷ್ಟ್ರಪತಿಯವರಿಗೆ ಆಹ್ವಾನ ನೀಡಿರಲಿಲ್ಲ. ಪಂಡಿತ್ ಜವಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಸೋಮನಾಥ ದೇವಾಲಯ ಉದ್ಘಾಟನೆಗೂ ಆಹ್ವಾನಿಸಿರಲಿಲ್ಲ ಎಂದು ಹೇಳಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಿಂದ ಅಸಮಾಧಾನ ವ್ಯಕ್ತವಾಯಿತು. ಈ ಹಂತದಲ್ಲಿ ಪ್ರಿಯಾಂಕ್ ಖರ್ಗೆ, ನನ್ನ ಸಿದ್ಧಾಂತವನ್ನು ನಾನು ಪ್ರತಿಪಾದಿಸುತ್ತೇನೆ. ಅದು ಪ್ರಜಾಪ್ರಭುತ್ವ, ಸಂವಿಧಾನ ನೀಡಿರುವ ಹಕ್ಕು ಎಂದು ತಿರುಗೇಟು ನೀಡಿದರು.
ವಿಧಾನಸಭೆ ಅಧಿವೇಶನದಲ್ಲಿ ಆರ್.ಅಶೋಕ್ ಮಾತು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಪದೇ ಪದೇ ವಾಗ್ವಾದ ನಡೆದು, ಒಂದು ಹಂತದಲ್ಲಿ ಬಿಜೆಪಿಯ ಸುನಿಲ್ ಕುಮಾರ್ ರಾಮಮಂದಿರ ಕಟ್ಟುವುದಾಗಿ ಹೇಳಿದ್ದೆವು. ಅದನ್ನು ಕಟ್ಟಿದ್ದೇವೆ. ರಾಮಮಂದಿರ ನಮ್ಮ ಬದ್ಧತೆ ಎಂದಾಗ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಆಗ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರೆ, ಕಾಂಗ್ರೆಸ್ ಸದಸ್ಯರು ಜೈ ಭೀಮ್ ಎಂಬ ಘೋಷಣೆ ಕೂಗಿದರು. ಆಗ ಸಭಾಧ್ಯಕ್ಷರು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರನ್ನು ಸಮಾಧಾನಪಡಿಸಿ ಅಶೋಕ್ ಅವರಿಗೆ ಅವಕಾಶ ನೀಡಿದರು.
ಮಾತು ಮುಂದುವರೆಸಿದ ಅಶೋಕ್, ವಿರೋಧ ಪಕ್ಷವಿರುವುದೇ ಟೀಕೆ ಮಾಡಲು. ಶ್ರೀಕಾಂತ್ ಪೂಜಾರಿಯದು 31 ವರ್ಷದ ಹಿಂದಿನ ಕೇಸು. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ಬಂಧಿಸಲಾಗಿದೆ. ಇದನ್ನು ಖಂಡಿಸುತ್ತೇನೆ. ಶ್ರೀಕಾಂತ್ ಪೂಜಾರಿ ಮೇಲಿನ ಕೇಸುಗಳು ವಜಾ ಆಗಿವೆ. ಆದರೂ ಅಪರಾಧಿ ಎಂದು ಹೇಳಲು ನೀವು ಯಾರು? ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು ಎಂದು ಖಾರವಾಗಿ ನುಡಿದರು.
ವಿಧಾನಸಭೆ ಅಧಿವೇಶನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕ ಅಪರಾಧದ ನಾಡಾಗಿ ಕುಖ್ಯಾತಿ:ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಅಪರಾಧದ ನಾಡಾಗಿ ಕುಖ್ಯಾತಿ ಪಡೆಯುತ್ತಿದೆ ಎಂದು ಆರ್.ಅಶೋಕ್ ಆರೋಪಿಸಿದರು. ಅಪರಾಧಗಳ ಸಂಖ್ಯೆ ಶೇ.25ರಿಂದ ಶೇ.30ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 1,80,742 ಪ್ರಕರಣಗಳು ವರದಿಯಾಗಿವೆ. ನಮ್ಮ ಸರ್ಕಾರದ ಅವಗಿಂತ ಇದು ಶೇ.40ರಷ್ಟು ಹೆಚ್ಚಾಗಿದೆ. ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.56ರಷ್ಟು ಹೆಚ್ಚಾಗಿವೆ ಎಂದು ಅವರು ತಿಳಿಸಿದರು.
ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಬೆಂಗಳೂರು ಕ್ರೈಂ ರಾಜಧಾನಿಯಾಗುತ್ತಿದೆ. ಸೈಬರ್ ಕ್ರೈಂನಲ್ಲಿ ಮೊದಲ ಸ್ಥಾನದಲ್ಲಿದೆ. ಒಂದೇ ವರ್ಷದಲ್ಲಿ 432 ಕೋಟಿ ರೂ. ಸೈಬರ್ ಕ್ರೈಂ ಮೂಲಕ ಲೂಟಿಯಾಗಿದೆ. ಬೆಂಗಳೂರು ಸುರಕ್ಷತಾ ನಗರ ಹೋಗಿ ಕ್ರೈಂ ಸಿಟಿಯಾಗಿ ಮಾರ್ಪಡುತ್ತಿದೆ. ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಕೆಎಫ್‍ಡಿ, ಪಿಎಫ್‍ಐ ಮೇಲಿನ 1,600 ಕೇಸುಗಳನ್ನು ಸರ್ಕಾರ ವಾಪಸ್ ಪಡೆದಿದೆ. ಇದರಿಂದ ಅಂಥವರಿಗೆ ಧೈರ್ಯ ಬಂದಾಂತಾಗಿದೆ. ಕೋಲಾರದಲ್ಲಿ ಸ್ಟೀಲ್‍ನಿಂದ ನಿರ್ಮಿಸಿದ 30 ಅಡಿ ಅಗಲ, 40 ಅಡಿ ಎತ್ತರದ ಮಚ್ಚು, ಲಾಂಗಿನಿಂದ ಮಾಡಿದ ಕಟೌಟ್ ಹಾಕಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಆರಗ ಜ್ಞಾನೇಂದ್ರ ಮಾತು ಬಳ್ಳಾರಿಯಲ್ಲಿ 8 ಮಂದಿ ಶಂಕಿತ ಉಗ್ರರನ್ನು ಎನ್‍ಐಎ ಬಂಸಿದೆ. ಸಮಾಜದಲ್ಲಿ ಭೀತಿ ಹುಟ್ಟಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಮಿನಾಜ್ ಅಲಿಯಾಸ್ ಮಹಮ್ಮದ್ ಸುಲೈಮಾನ್ ಎಂಬ ವ್ಯಕ್ತಿ ಕಿಂಗ್ ಪಿನ್ ಆಗಿದ್ದು, ಅಮಾಯಕರಿಗೆ ಹಣ, ಉದ್ಯೋಗ, ಧರ್ಮದ ಆಮಿಷವೊಡ್ಡಿ ಅಪರಾಧ ಕೃತ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತಿತ್ತು ಎಂಬ ವರದಿಯಾಗಿದೆ. ಶಿವಾಜಿನಗರ ಪುಲಕೇಶಿ ನಗರದಲ್ಲೂ ಕೂಡ ಶಂಕಿತ ಉಗ್ರರನ್ನು ಬಂಸಲಾಗಿದೆ. ಇವರಿಗೆ ಹಣ ಎಲ್ಲಿಂದ ಬಂತು, ಯಾರು ಕಳುಹಿಸಿದರು ಎಂಬುದು ಗೊತ್ತಾಗುವುದಿಲ್ಲ. ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಚಿತ್ರದುರ್ಗದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಹಲ್ಲೆ ನಡೆಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆ ಸತ್ತಿದೆಯೋ? ಬದುಕಿದೆಯೋ ಅಥವಾ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆಯೋ ಗೊತ್ತಿಲ್ಲ. ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರತಿಭಟನೆ ಮಾಡುತ್ತಾರೆ. ಅದು ಪೊಲೀಸಿನವರಿಗೇ ಗೊತ್ತಾಗುವುದಿಲ್ಲ. ಪ್ರತಿಭಟನೆ ಮಾಡಿದವರ ಮೇಲೆ ಕ್ರಮವೂ ಆಗುವುದಿಲ್ಲ. ಪೊಲೀಸ್ ನೈತಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದರು.
ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ, ಹಾವೇರಿ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ, ಕೋಲಾರ ಮತ್ತು ಬೆಂಗಳೂರಿನ ಆಂದ್ರಹಳ್ಳಿಯಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಶುಚಿಗೊಳಿಸಿದ ಪ್ರಕರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅಶೋಕ್, ಇದಕ್ಕೆ ಸರ್ಕಾರದ ಆಡಳಿತ ವೈಫಲ್ಯ ಕಾರಣ ಎಂದು ದೂರಿದರು.
ವಿಧಾನಸಭೆ ಅಧಿವೇಶನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಚಿಂತಾಮಣಿಯಲ್ಲಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಊಟ ನೀಡಲಿಲ್ಲ ಎಂದು ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲಿನ ಕೋಪಕ್ಕ ಅಲ್ಲಿನ ವಾರ್ಡನ್ ಊಟದಲ್ಲಿ ಮಲ ಬೆರೆಸಿರುವುದು ಎಫ್‍ಎಸ್‍ಐಎಲ್ ವರದಿಯಲ್ಲಿ ಗೊತ್ತಾಗಿದೆ. ವರದಿ ಬಂದು ಮೂರು ತಿಂಗಳಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಆಗಿತ್ತು. ಬೆಂಗಳೂರಿನಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲೆ ಬೆಂಕಿ ಹಾಕಲಾಗಿತ್ತು ಎಂಬುದು ಸೇರಿದಂತೆ ಹಲವು ಘಟನೆಗಳನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕಾನೂನು ಸುವ್ಯವಸ್ಥೆ ವಿಚಾರ