ಬೆಂಗಳೂರು :ವಿಧಾನಸಭೆಯಲ್ಲಿ ಸೋಮವಾರ ಕಮಿಷನ್ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಪರಸ್ಪರ ವಾಕ್ಸಮರ ಉಂಟಾಯಿತು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಗುತ್ತಿಗೆದಾರರಿಗೆ ಸರ್ಕಾರ ಬಾಕಿ ಬಿಲ್ ಪಾವತಿಸುತ್ತಿಲ್ಲ. ಮೊನ್ನೆ ಕೆಂಪಣ್ಣ 40% ಕಮಿಷನ್ ಈ ಸರ್ಕಾರದಲ್ಲಿ ಇದೆ ಎಂದು ಹೇಳಿದ್ದಾರೆ. ಬಳಿಕ ಪಾಪ ಅವರ ಬಾಯಿಯನ್ನು ಬಂದ್ ಮಾಡಿದರು. ಕೆಂಪಣ್ಣ ಬಾಯಿಗೆ ಅದೇನು ಜೇನು ತುಪ್ಪ ಹಾಕಿದರಾ? ಬೆಲ್ಲ ಹಾಕಿದರಾ? ಗೊತ್ತಿಲ್ಲ ಎಂದು ಟೀಕಿಸಿದರು.
ಆಗ ಮಧ್ಯ ಪ್ರವೇಶಿಸಿದ ಡಿ.ಕೆ ಶಿವಕುಮಾರ್ ನಿನ್ನ ನುಡಿಮುತ್ತಿನಲ್ಲೇ ಕೋವಿಡ್ ನಲ್ಲಿ ನಡೆದ ಅಕ್ರಮದ ಬಗ್ಗೆ ಹೇಳಿದ್ದೀಯಲ್ಲಪ್ಪಾ. ಅದನ್ನು ಹೇಳು ಎಂದು ಯತ್ನಾಳ್ಗೆ ತಿರುಗೇಟು ನೀಡಿದರು. ಈ ವೇಳೆ ಯತ್ನಾಳ್ ಏಕವಚನದಲ್ಲೇ ಡಿಕೆಶಿಗೆ ಕೌಂಟರ್ ನೀಡಿದರು. ನೀನು ಏಕವಚನದಲ್ಲಿ ಮಾತನಾಡಿದರೆ ನಾನು ಏಕ ವಚನದಲ್ಲೇ ಮಾತನಾಡುತ್ತೇನೆ. ನಾನೇನು ನಿನ್ನ ಮುಲಾಜಿನಲ್ಲಿ ಇಲ್ಲ. ನಾನೇನು ನಿನ್ನ ಬಳಿ ಬರುವುದಿಲ್ಲ. ನನಗೆ ನಿನ್ನ ಬಳಿ ಬರುವ ಅಗತ್ಯ ಇಲ್ಲ. ಬಿಬಿಎಂಪಿಯಲ್ಲಿ ಎಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಜಗತ್ತಿಗೆ ಗೊತ್ತು ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ದೇವರು, ನಮ್ಮ ಹಣ, ನಮ್ಮ ಹಕ್ಕು:ದೇವಸ್ಥಾನಗಳ ಆದಾಯ ಸರ್ಕಾರ ತೆಗೆದುಕೊಳ್ಳುತ್ತಿದೆ. ದೇಗುಲಗಳ ಆದಾಯ ಗ್ಯಾರಂಟಿಗಳಿಗೆ ಬಳಕೆ ಮಾಡಲಾಗುತ್ತಿದೆ. ದೇವಸ್ಥಾನಗಳ ಆದಾಯ ದೇಗುಲಗಳ ಅಭಿವೃದ್ಧಿಗೆ ಬಳಸಬೇಕು. ನನ್ನ ತೆರಿಗೆ ನಮ್ಮ ಹಕ್ಕು ಅಂತ ಹೇಳಿ ದೆಹಲಿ ಚಲೋ ಮಾಡಿದ್ದೀರಾ?. ಇಲ್ಲಿ ನಮ್ಮ ದೇವರು, ನಮ್ಮ ಹಣ, ನಮ್ಮ ಹಕ್ಕೂ. ದೇವರಿಗೆ, ದೇವಸ್ಥಾನಕ್ಕೆ ಅಂತ ನಾವು ಹಣ ಕೊಡುತ್ತೇವೆ. ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಯಾರ್ಯಾರಿಗೆ ಬೇಕೋ ಕೊಡುತ್ತಿದ್ದೀರಾ. ಇದು ಯಾರಪ್ಪನ ಆಸ್ತಿ? ದೇವಸ್ಥಾನಗಳ ಮೇಲೆ ಮಾತ್ರ ನಿಮ್ಮ ಕಾನೂನೇಕೆ? ಮಸೀದಿ, ಚರ್ಚ್ ಗಳ ಮೇಲೆ ಯಾಕೆ ನಿಮ್ಮ ಕಾನೂನು ಅನ್ವಯ ಆಗಲ್ಲ?. ದೇವಸ್ಥಾನಗಳಲ್ಲಿ ಮುಕ್ತ ಆಡಳಿತ ತನ್ನಿ, ಆಗಲೇ ನಿಜವಾದ ಜಾತ್ಯಾತೀತತೆ ಎಂದು ಸರ್ಕಾರಕ್ಕೆ ಯತ್ನಾಳ್ ಆಗ್ರಹಿಸಿದರು.