ಬೆಂಗಳೂರು:ತಮ್ಮ ಬಗ್ಗೆ ಅವಹೇಳನಕಾರಿ ಹಾಗೂ ಕೋಮು ನಿಂದನೆ ಮಾಡುತ್ತಿರುವ ಬಿಜೆಪಿ ಎಕ್ಸ್ ಪೋಸ್ಟ್ಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ನೀಡಿರುವ ಟಬು ರಾವ್, ತಮ್ಮ ಹಾಗೂ ತಮ್ಮ ಸಮುದಾಯದ ವಿರುದ್ಧ ಬಿಜೆಪಿ ಎಕ್ಸ್ ಹ್ಯಾಂಡ್ಲರ್ಗಳು ಕೆಟ್ಟದಾಗಿ, ಅವಹೇಳನಕಾರಿಯಾಗಿ ನಿಂದಿಸುತ್ತಿದ್ದಾರೆ. ಆರೋಗ್ಯ ಸಚಿವರ ಪತ್ನಿಯಾಗಿ ಅನಗತ್ಯವಾಗಿ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ. ನನ್ನ ವೈವಾಹಿಕ ಸಂಬಂಧ ಹಾಗೂ ಧರ್ಮದ ಹಿನ್ನೆಲೆ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಅವಹೇಳನಕಾರಿ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ದುರಾದೃಷ್ಟವಶಾತ್ ಇದು ದಿನಚರಿಯಾಗಿ ಬಿಟ್ಟಿದೆ. ಬಿಜೆಪಿ ನಾಯಕರು ಹಾಗೂ ಅವರ ಸಾಮಾಜಿಕ ಜಾಲತಾಣ ನನ್ನ ಮೇಲೆ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ನಾನು ರಾಜಕೀಯದಲ್ಲಿ ಇಲ್ಲವಾದರೂ ನನ್ನ ವೈಯ್ಯಕ್ತಿಕ ಜೀವನ ಮತ್ತು ಸಮುದಾಯವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಇದು ಸ್ವೀಕಾರಾರ್ಹವಲ್ಲ ಎಂದು ದೂರಿದ್ದಾರೆ.
ರಾಜ್ಯ ಬಿಜೆಪಿ ಸಿಬ್ಬಂದಿ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾನು ಆಯೋಗವನ್ನು ಮನವಿ ಮಾಡುತ್ತೇನೆ. ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನನ್ನ ಗೌರವಕ್ಕೆ ಚ್ಯುತಿ ತರುತ್ತಿದ್ದು, ಮಾನಸಿಕವಾಗಿ ಘಾಸಿಗೊಳಿಸುತ್ತಿದ್ದಾರೆ. ಕೋಮು ನಿಂದನೆ ಮಾಡಿ ನನ್ನ ಸಮುದಾಯದ ವಿರುದ್ಧ ದ್ವೇಷ ಮತ್ತು ಅಸಹಿಷ್ಣತೆ ಸೃಷ್ಟಿಸುತ್ತಿದ್ದಾರೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ನನ್ನ ಗೌರವ ಕಾಪಾಡುವುದರ ಜೊತೆಗೆ ಮತ್ತಷ್ಟು ಕಿರುಕುಳಕ್ಕೆ ಒಳಗಾಗುವುದರಿಂದ ರಕ್ಷಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಸ್ವಇಚ್ಛೆಯಿಂದ ರಾಜೀನಾಮೆ: ಬಾಲಚಂದ್ರ ಜಾರಕಿಹೊಳಿ - Balachandra Jarkiholi