ಮೈಸೂರು: ದಸರಾ ಜಂಬೂಸವಾರಿಗೆ ಮೆರುಗು ನೀಡುವ ಸ್ತಬ್ಧಚಿತ್ರಗಳ ತಯಾರಿ ಭರದಿಂದ ಸಾಗುತ್ತಿದೆ. ನಾಡಿನ ಕಲೆ, ವಾಸ್ತುಶಿಲ್ಪ, ಪ್ರವಾಸೋದ್ಯಮ, ಜಾನಪದ, ಸಮಾನತೆ, ಭ್ರಾತೃತ್ವ ಹಾಗೂ ಸಂವಿಧಾನದ ಮಹತ್ವ ಮೊದಲಾದ ಪರಿಕಲ್ಪನೆ ಇಟ್ಟುಕೊಂಡು ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಬಾರಿ 31 ಜಿಲ್ಲೆಗಳಿಂದ 31 ಹಾಗೂ ವಿವಿಧ ಇಲಾಖೆಗಳ 19 ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.
ಈ ಕುರಿತು ಸ್ತಬ್ಧಚಿತ್ರಗಳ ಉಪ ಸಮಿತಿ ಅಧ್ಯಕ್ಷ ಪ್ರಶಾಂತ್ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಈ ಎಲ್ಲಾ ಸ್ತಬ್ಧಚಿತ್ರಗಳು ನಗರದ ಬಂಡಿಪಾಳ್ಯ ಎಪಿಎಂಸಿ ಯಾರ್ಡ್ನಲ್ಲಿ ತಯಾರಾಗುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೂ ನಿರ್ಮಿಸಲಾದ ಸುಮಾರು 2,500 ಕಿ.ಮೀ. ಉದ್ದದ ಮಾನವ ಸರಪಳಿ ಸ್ತಬ್ಧಚಿತ್ರ, ಭಾರತೀಯ ರೈಲ್ವೆ ಪ್ರಗತಿ ನೋಟ ಸ್ತಬ್ಧಚಿತ್ರ, ಸಿಎಫ್ಟಿಆರ್ಐನ ಹೊಸ ಆವಿಷ್ಕಾರಗಳು, ಮೈಸೂರು ರೇಷ್ಮೆ ಸೀರೆ, ಶ್ರೀಗಂಧದ ಉತ್ಪನ್ನಗಳು, ನಂದಿನಿ ಹಾಲಿನ ಉತ್ಪನ್ನಗಳ ಕುರಿತ ಸ್ತಬ್ಧಚಿತ್ರಗಳು. ಪ್ರವಾಸೋದ್ಯಮ ಇಲಾಖೆ ಹಾಗೂ ಜನಸ್ನೇಹಿ ಪೊಲೀಸ್, ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ" ಎಂದು ತಿಳಿಸಿದರು.