ಹೈದರಾಬಾದ್: ಟಿ20 ವಿಶ್ವಕಪ್‌ನ ಸೂಪರ್-8ರ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಮಣಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ (ನಾಳೆ) ಸೆಮಿಫೈನಲ್ನಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದು ಎರಡನೇ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್ ಸೆಮಿಸ್ನಲ್ಲಿ ಮುಖಾಮುಖಿಯಾಗುತ್ತಿವೆ.
ಈ ಹಿಂದೆ 2022ರಲ್ಲಿ ಅಡಿಲೇಡ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ನೀಡಿದ್ದ 168 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ ಗೆದ್ದು ಬೀಗಿತ್ತು. ತಂಡದ ಪರ ಆರಂಭಿಕ ಬ್ಯಾಟರ್ಗಳಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಗಮನಾರ್ಹ ಪ್ರದರ್ಶನ ತೋರಿದ್ದರು. ಇದೀಗ ಭಾರತ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಇದರ ನಡುವೆಯೇ ಸೆಮಿಫೈನಲ್ ಪಂದ್ಯಗಳಿಗಾಗಿ ಐಸಿಸಿ ಕೆಲ ನಿಯಮಗಳನ್ನು ಬದಲಾವಣೆ ಮಾಡಿದೆ. ಮೊದಲ ಮತ್ತು ಎರಡನೇ ಸೆಮಿಸ್ ಪಂದ್ಯಗಳ ನಿಯಮಗಳು ಭಿನ್ನವಾಗಿರಲಿವೆ.
ಸೆಮಿಫೈನಲ್ ನಿಯಮ: ಮೊದಲ ಸೆಮಿಸ್ನಲ್ಲಿ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಮಳೆ ಬಂದು ನಿಂತರೆ ಪಂದ್ಯದ ಸಮಯವನ್ನು ಹೆಚ್ಚುವರಿಯಾಗಿ 60 ನಿಮಿಷಗಳ ಕಾಲ ವಿಸ್ತರಿಸಲು ಅವಕಾಶ ಇರಲಿದೆ. ಪಂದ್ಯ ರದ್ದಾದರೆ ಮೀಸಲು ದಿನ ನಿಗದಿ ಪಡಿಸಲಾಗುತ್ತದೆ ಹೆಚ್ಚುವರಿಯಾಗಿ ಅಂದು 190 ನಿಮಿಷಗಳು ಇರಲಿದೆ.
ಆದರೇ ಎರಡನೇ ಸೆಮಿಸ್ ಪಂದ್ಯಕ್ಕೆ (ಭಾರತ ಮತ್ತು ಇಂಗ್ಲೆಂಡ್) ಮೀಸಲು ದಿನ ಇರುವುದಿಲ್ಲ. ಮಳೆ ಬಂದದ್ದೇ ಆದಲ್ಲಿ ಹೆಚ್ಚುವರಿಯಾಗಿ 250 ನಿಮಿಷಗಳನ್ನು ನಿಗದಿ ಪಡಿಸಲಾಗಿದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೇ ಕನಿಷ್ಠ 5 ಓವರ್ಗಳ ಪಂದ್ಯವನ್ನಾದರೂ ನಡೆಸಲು ಪ್ರಯತ್ನಿಸಲಾಗುತ್ತದೆ. ಒಂದೇ ಒಂದು ಎಸೆತ ಕಾಣದೇ ಪಂದ್ಯ ರದ್ದಾದರೇ ಸೂಪರ್ -8 ರಲ್ಲಿನ ಅಂಕಪಟ್ಟಿಯ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಲಿದೆ. ಇದರಿಂದ ಭಾರತಕ್ಕೆ ಲಾಭವಾಗಲಿದೆ. ಹವಾಮಾನ ಇಲಾಖೆ ಪ್ರಕಾರ ಗುರುವಾರ ಗಯಾನದಲ್ಲಿ ಶೇ 76ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.