ಬೆಂಗಳೂರು:ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಮುಜಾಮಿಲ್ ಪಾಷಾ ಎಂಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ ಆತನನ್ನು ನಗರದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈತ ಕೆಫೆ ಸ್ಫೋಟದ ಪ್ರಮುಖ ಆರೋಪಿಗೆ ಬಾಂಬ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸಾಗಿಸಿರುವ ಜತೆಗೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಅನುಮತಿ ನೀಡುವಂತೆ ಮಾಡಿಕೊಂಡ ಮನವಿ ಪುರಸ್ಕರಿಸಿದ ಕೋರ್ಟ್, ಶಂಕಿತನನ್ನು ಏಳು ದಿನಗಳ ಕಾಲ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ.