ಬೆಂಗಳೂರು:ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಗುಜರಾತ್ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ಪ್ರಸ್ತುತ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಕರ್ನಾಟಕದವರೇ ಆದ ಪಿ.ಎಸ್.ದಿನೇಶ್ ಕುಮಾರ್ ಇದೇ ತಿಂಗಳು (ಫೆಬ್ರವರಿ) 24ರಂದು ನಿವೃತ್ತಿ ಆಗಲಿದ್ದಾರೆ. ಅವರಿಂದ ತೆರವಾಗುವ ಹುದ್ದೆಗೆ ನ್ಯಾಯಮೂರ್ತಿ ಅಂಜಾರಿಯಾ ಅವರನ್ನು ನೇಮಕ ಮಾಡಲು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನ್ಯಾಯಮೂರ್ತಿ ಅಂಜಾರಿಯಾ 2011ರ ನವೆಂಬರ್ 21ರಂದು ಗುಜರಾತ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆಯುವ ಮುನ್ನ ಗುಜರಾತ್ ಹೈಕೋರ್ಟ್‌ನಲ್ಲಿ ಸಿವಿಲ್, ಸಾಂವಿಧಾನಿಕ, ಕಂಪೆನಿ ಕಾನೂನು, ಕಾರ್ಮಿಕ ಮತ್ತು ಸೇವಾ ವಿಷಯಗಳಲ್ಲಿ ವಕೀಲಿಕೆ ಮಾಡಿದ್ದರು. ಅಲ್ಲದೆ, ಸಿವಿಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ ಎಂದು ಕೊಲಿಜಿಯಂ ತಿಳಿಸಿದೆ.
ಅಲ್ಲದೆ, ಅಂಜಾರಿಯಾ ಅವರ ಹೆಸರನ್ನು ಶಿಫಾರಸು ಮಾಡುವಾಗ, ಕೊಲಿಜಿಯಂ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಗಣನೆಗೆ ತೆಗೆದುಕೊಂಡು, ನ್ಯಾಯಮೂರ್ತಿ ಆಶಿಶ್ ಜೆ ದೇಸಾಯಿ ಅವರು ಪ್ರಸ್ತುತ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಿದೆ. ಬಳಿಕ ನ್ಯಾಯಮೂರ್ತಿ ಅಂಜಾರಿಯಾ ಅವರನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಎಲ್ಲಾ ಅಂಶಗಳಲ್ಲಿ ಸೂಕ್ತ ಎಂದು ಪರಿಗಣಿಸಲಾಗಿದೆ ಎಂದು ಕೊಲಿಜಿಯಂ ಹೇಳಿದೆ.
ಇದನ್ನೂ ಓದಿ:27 ವರ್ಷದ ಬಳಿಕ ಕರ್ನಾಟಕ ಹೈಕೋರ್ಟ್‌ಗೆ ಕನ್ನಡಿಗ ಮುಖ್ಯ ನ್ಯಾಯಮೂರ್ತಿ