ಸುಮಲತಾ ಬೆಂಬಲಿಗ ಹನಕೆರೆ ಶಶಿ ಮಂಡ್ಯ :ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕನಸು ಕಂಡಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈತಪ್ಪಿದೆ. ಮೈತ್ರಿ ಪಕ್ಷವಾದ ಜೆಡಿಎಸ್ಗೆ ಬಿಜೆಪಿ ವರಿಷ್ಠರು ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಸಂಸದೆ ಸುಮಲತಾ ಅವರಿಗೆ ಕ್ಷೇತ್ರವಿಲ್ಲದೆ ಅತಂತ್ರರಾಗಿದ್ದಾರೆ. ಅಲ್ಲದೇ ಅವರ ಮುಂದಿನ ನಡೆ ಏನು? ಎಂಬುದು ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ಹಾಗಿದ್ರೆ ಸುಮಲತಾ ಅವರ ಮುಂದಿನ ನಡೆ ಏನು? ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹೌದು, ಸಾಕಷ್ಟು ಗೊಂದಲವಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರಕ್ಕೆ ಕಡೆಗೂ ಬಿಜೆಪಿ ವರಿಷ್ಠರು ಇತಿಶ್ರೀ ಹಾಡಿದ್ದಾರೆ. ಜೆಡಿಎಸ್ನ ಭದ್ರಕೋಟೆ ಎನಿಸಿರೋ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ಉಳಿದ ಹಾಸನ, ಕೋಲಾರ ಹಾಗು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಬೆಂಗಳೂರಿನಲ್ಲಿ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಪಕ್ಷದ ಲೋಕಸಭಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮೈತ್ರಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ.
ಸುಮಲತಾ ಬೆಂಬಲಿಗ ಹನಕೆರೆ ಶಶಿ ಇನ್ನು ಮಂಡ್ಯ ಕ್ಷೇತ್ರದಿಂದಲೇ ತನ್ನ ಸ್ಪರ್ಧೆ, ಮಂಡ್ಯ ಕ್ಷೇತ್ರದ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಬಿಜೆಪಿ ವರಿಷ್ಠರು ತನಗೆ ಮಂಡ್ಯದ ಟಿಕೆಟ್ ಕೊಡಲಿದ್ದಾರೆ ಎನ್ನುವ ಭರವಸೆಯಲ್ಲಿದ್ದ ಸಂಸದೆ ಸುಮಲತಾಗೆ ಬಿಜೆಪಿ ಹೈಕಮಾಂಡ್ನ ಈ ನಿರ್ಧಾರ ಶಾಕ್ ನೀಡಿದೆ. ಇದರಿಂದಾಗಿ ಸಂಸದೆ ಸುಮಲತಾ ಇದೀಗ ಕ್ಷೇತ್ರವಿಲ್ಲದೆ ಅತಂತ್ರರಾಗಿದ್ದಾರೆ. ಅಲ್ಲದೆ ಹೈ ಕಮಾಂಡ್ನ ಈ ನಿರ್ಧಾರದ ಬಳಿಕ ಸಂಸದೆ ಸುಮಲತಾ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಆದ್ರೆ ಸಂಸದೆ ಸುಮಲತಾ ಬೆಂಬಲಿಗರು ಮಾತ್ರ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಂಡ್ಯದಲ್ಲಿ ನಾಳೆ ಸಭೆ ಕರೆದು, ಚರ್ಚೆ ಮಾಡಿ ಸಂಸದೆ ಸುಮಲತಾ ಅವರು ಮತ್ತೆ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಲು ಹೇಳುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಮಂಡ್ಯ ಕ್ಷೇತ್ರ ಇದೀಗ ಜೆಡಿಎಸ್ ಪಕ್ಷದ ಪಾಲಾಗಿರುವುದರಿಂದ ಸಂಸದೆ ಸುಮಲತಾಗೆ ಕ್ಷೇತ್ರವಿಲ್ಲದಂತಾಗಿದೆ. ಇದರ ನಡುವೆ ಬಿಜೆಪಿ ವರಿಷ್ಠರು ಸುಮಲತಾಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡಲಿದೆ ಎಂಬ ಭರವಸೆ ನೀಡಿದೆಯಾದ್ರೂ ಸಂಸದೆ ಸುಮಲತಾ ಮಾತ್ರ ತಮ್ಮ ಮುಂದಿನ ನಿರ್ಧಾರ ಏನು ಎಂದು ತಿಳಿಸಿಲ್ಲ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಸದೆ ಸುಮಲತಾ ಮತ್ತೆ ಪಕ್ಷೇತರವಾಗಿ ನಿಲ್ತಾರಾ? ಇಲ್ಲ ಮೈತ್ರಿ ಅಭ್ಯರ್ಥಿ ಒಪ್ಪಿಕೊಂಡು ಮೈತ್ರಿ ಗೆಲುವಿಗೆ ಶ್ರಮಿಸ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ :ಮಂಡ್ಯ ಟಿಕೆಟ್ ಬಗ್ಗೆ ವರಿಷ್ಠರು ಇನ್ನೂ ತೀರ್ಮಾನಿಸಿಲ್ಲ: ಸುಮಲತಾ ಅಂಬರೀಶ್