ಸತ್ಯಜಿತ್ ಸುರತ್ಕಲ್ ಪತ್ರಿಕಾಗೋಷ್ಟಿ ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂ ಸಂಘಟನೆಯ ಮುಖಂಡ, ಬಿಲ್ಲವ ನಾಯಕ ಸತ್ಯಜಿತ್ ಸುರತ್ಕಲ್ ಅವರು ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.
ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷರಾಗಿರುವ ಸತ್ಯಜಿತ್ ಸುರತ್ಕಲ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. 2019ರಲ್ಲಿಯೂ ಬಿಜೆಪಿ ಟಿಕೆಟ್ಗಾಗಿ ಪ್ರಯತ್ನಪಟ್ಟಿದ್ದರು. ಆದರೆ ಎರಡು ಬಾರಿಯೂ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀ ನಾರಾಯಣಗುರು ವಿಚಾರ ವೇದಿಕೆಯಿಂದ ಮೂರು ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ತಿಳಿಸಿದರು.
"ಅನೇಕ ವರ್ಷಗಳ ಬಳಿಕ ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಮೂವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ನೀಡಿವೆ. ಆದ್ದರಿಂದ ದ.ಕ. ಜಿಲ್ಲೆಯಲ್ಲಿ ಪದ್ಮರಾಜ್, ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಶ್ರೀ ನಾರಾಯಣಗುರು ವಿಚಾರ ವೇದಿಕೆ ಮಾಡಲಿದೆ. ಈ ಮೂವರು ಗೆದ್ದಲ್ಲಿ ಸಮಾಜಕ್ಕೊಂದು ಬಲ ಬರಲಿದೆ. ಆದ್ದರಿಂದ ಸಮಾಜ ಬಾಂಧವರು ಪಕ್ಷಗಳನ್ನು ಬದಿಗೊತ್ತಿ ಈ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕು" ಎಂದು ಮನವಿ ಮಾಡಿದರು.
"ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಬಿಲ್ಲವ ಸಮಾಜಕ್ಕೆ ಅನ್ಯಾಯ ಮಾಡಿದೆ. ಕೋಟ ಅವರು ಎಂಎಲ್ಸಿ ಹಾಗೂ ವಿಧಾನಪರಿಷತ್ನ ವಿಪಕ್ಷ ನಾಯಕನ ಹುದ್ದೆಯಲ್ಲಿದ್ದವರು. ಇಂತಹ ಹುದ್ದೆ ಈ ಸಮಾಜಕ್ಕೆ ಮತ್ತೆ ದೊರಕಲು ಸಾಧ್ಯವಿಲ್ಲ. ಸಮಾಜದ ಬೇರೆಯವರಿಗೆ ಬಿಜೆಪಿ ಈ ಟಿಕೆಟ್ ಕೊಟ್ಟಿದ್ದರೆ ಅದಕ್ಕೊಂದು ಬೆಲೆಯಿತ್ತು. ಕೋಟ ಅವರಿಗೆ ಟಿಕೆಟ್ ಕೊಟ್ಟಿರುವುದು ಬಿಲ್ಲವ ಸಮಾಜಕ್ಕೆ ಲಾಭಕ್ಕಿಂತ ಹೆಚ್ಚು ಅನ್ಯಾಯವಾಗಿದೆ" ಎಂದರು.
"ರಾಜ್ಯದಲ್ಲಿ ಬಿಜೆಪಿಯಿಲ್ಲ. ವಿಧಾನಸಭೆ ಚುನಾವಣೆಯವರೆಗೆ ಬಿಎಲ್ಪಿ (ಬಿ.ಎಲ್.ಸಂತೋಷ್ ಪಾರ್ಟಿ) ಇತ್ತು. ಈಗ ಬಿಎಸ್ಪಿ (ಬಿ.ಎಸ್.ಯಡಿಯೂರಪ್ಪ ಪಾರ್ಟಿ) ಇದೆ. ಯಾರು ಅವರ ಹಿಂದೆ ನೇತಾಡುತ್ತಾರೆ, ಬಕೆಟ್ ಹಿಡಿಯುತ್ತಾರೆ, ಅವರು ಏನೇ ಹೇಳಿದರೂ ಜೈ ಅನ್ನುತ್ತಾರೆ" ಎಂದರು.
ತಮಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡದಿರುವ ಬಗ್ಗೆ ಮಾತನಾಡಿದ ಅವರು, "ನಾನು ಹುಟ್ಟಿದ ಜಾತಿ, ಊರು ಸರಿಯಲ್ಲ. ನಾನು ಬ್ರಾಹ್ಮಣ, ಒಕ್ಕಲಿಗ, ಬಂಟ, ಲಿಂಗಾಯತನಾಗಿ ಹುಟ್ಟಿದ್ದರೆ ಅವಕಾಶ ಸಿಗುತ್ತಿತ್ತು. ಶೂದ್ರ ಸಮಾಜದಲ್ಲಿ ಹುಟ್ಟಿದ್ದರಿಂದ ಸೇವೆ ಮಾಡಲು ಮಾತ್ರ ನನಗೆ ಅವಕಾಶವಿದೆ. ಆದ್ದರಿಂದ ಶೂದ್ರರು ತಾವಾಗಿಯೇ ಸ್ಥಾನ ಕೇಳಲು ಹೋಗಬಾರದು. ಇಲ್ಲಿ ನಾಯಕರು ಹೇಳಿದಂತೆ, ಬಾಲ ಮುದುರಿಕೊಂಡು ಬಕೆಟ್ ಹಿಡಿಯುವವರಿಗೆ, ಗುಲಾಮರಿಗೆ ಮಾತ್ರ ಬೆಲೆ. ಸ್ವಂತ ಶಕ್ತಿ ಇರುವವರಿಗೆ ಬೆಲೆಯಿಲ್ಲ" ಎಂದರು.
"ಕೇರಳ, ಮಲಪ್ಪುರಂ, ಕಾಶ್ಮೀರ, ರಾಮನಾಥಪುರಂಗಳಲ್ಲಿ ಜಿಹಾದಿ ಮಾನಸಿಕತೆ, ಭಯೋತ್ಪಾದನಾ ಚಟುವಟಿಕೆ, ಮತಾಂತರ ಹೆಚ್ಚಾಗಲು ಜಾತಿ ಹೆಸರಿನಲ್ಲಿ, ಮೇಲು - ಕೀಳೆಂಬ ತಾರತಮ್ಯ ಮಾಡಿ ಹಿಂದುತ್ವವಾದಿಗಳು ಅಮಾನುಷವಾಗಿ ನಡೆಸಿಕೊಂಡದ್ದೇ ಕಾರಣ. ಹಾಗಾಗಿ ಈಗಲೂ ಕೇರಳದಲ್ಲಿ ಬಿಜೆಪಿ ಇನ್ನೂ ನೆಲೆ ಕಾಣಲು ಸಾಧ್ಯವಾಗಿಲ್ಲ. ಹಿಂದುತ್ವದ ಭದ್ರಕೋಟೆಯನ್ನು ಹಿಂದುತ್ವವಾದಿಗಳೇ ಹಾಳುಮಾಡಿಕೊಂಡರು. ಇವರು ಮೊದಲು ಸಮಾಜದ ಒಳಗಡೆಯಿರುವ ಸಮಸ್ಯೆಗಳನ್ನು ಸರಿಪಡಿಸಲಿ. ಕರಾವಳಿಯಲ್ಲಿ ಹಿಂದುತ್ವ ಗಟ್ಟಿಯಾಗಿ ತಳವೂರಬೇಕಾದರೆ ಹಿಂದುಳಿದ ವರ್ಗದ ಜನರಿಗೂ ಸಮಾನ ಅವಕಾಶ ನೀಡಬೇಕು. ದೇವಸ್ಥಾನಗಳಲ್ಲಿ ಪಂಕ್ತಿಬೇಧ ಹೋಗಬೇಕು" ಎಂದು ಹೇಳಿದರು.
"ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಪದೇಪದೆ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಲು ನಾನು ಕೂಡಾ ಕಾರಣ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಅಂದು ಬಿಜೆಪಿ ನಾಯಕರು ಹೇಳುತ್ತಿದ್ದ ಮಾತು ನಿಜವಾಗುತ್ತದೆ ಎಂದು ನಾನು ಎನಿಸಿಕೊಂಡಿದ್ದೆ. ಆದರೆ ದುರ್ದೈವವಶಾತ್ ನಮ್ಮನ್ನು ದುರುಪಯೋಗ ಮಾಡಿ ಬಲಿಪಶು ಮಾಡಿ ಜನಾರ್ದನ ಪೂಜಾರಿಯವರ ಅವಸಾನ ಮಾಡಲಾಯಿತು" ಎಂದು ಅವರು ಹೇಳಿದರು.
ಇದನ್ನೂ ಓದಿ:ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಅವರಿಗೆ ವಾರ್ಷಿಕ 6.5 ಲಕ್ಷ ಆದಾಯ - Brijesh Chowta assets detail