ಬಾಗಲಕೋಟೆ: ಬೆನ್ನು, ಹೊಟ್ಟೆ, ಮೈ ಕೈ ನೋವು ಎಂದು ಬರುವ ಭಕ್ತರಿಗೆ ಕೊಡಲಿಯಿಂದ ಹೊಡೆದು ನೋವು ನಿವಾರಿಸುವುದಾಗಿ ಮೌಢ್ಯಾಚರಣೆ ಮಾಡುತ್ತಿದ್ದ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿ ಲಿಂಗೇಶ್ವರ ದೇವಸ್ಥಾನದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಕ್ಕಪ್ಪ ಗಡ್ಡದ್ ಬಂಧಿತ ಪೂಜಾರಿ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಅರ್ಚಕ ಜಕ್ಕಪ್ಪ ಗಡ್ಡದ್ ಅವರ ತೋಟದ ಮನೆಗೆ ಪ್ರತಿ ಭಾನುವಾರ ಹೊಟ್ಟೆ, ಬೆನ್ನು, ಕಾಲು ನೋವು ಎಂದು ಭಕ್ತರು ಬರುತ್ತಾರೆ. ಹೊಟ್ಟೆ ನೋವು ಇದ್ದಂತಹವನ್ನು ನೆಲದ ಮೇಲೆ ಮಲಗಿಸಿ ಹೊಟ್ಟೆಯ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾರೆ. ಬೆನ್ನು ನೋವು ಇದ್ದವರಿಗೆ ಬೆನ್ನಿನ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾರೆ. ಅರ್ಚಕ ತನ್ನ ಸ್ವಂತ ಲಾಭಕ್ಕಾಗಿ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಅವರು ಕೊಡಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಲೋಕಾಪುರ ಠಾಣೆಯ ಪಿಎಸ್ಐ, ಮೂಢನಂಬಿಕೆ ನಿಷೇಧ ಕಾಯಿದೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.