ಕರ್ನಾಟಕ

karnataka

ETV Bharat / state

ಸುಮಲತಾಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ: ರಾಧಾಮೋಹನ್ ದಾಸ್ ಅಗರ್‌ವಾಲ್ - Sumalatha

ಮೈತ್ರಿ ಕಾರಣಕ್ಕಾಗಿ ಸುಮಲತಾಗೆ ಟಿಕೆಟ್ ಕೊಡಲಾಗಿಲ್ಲ, ಅವರಿಗೆ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಭರವಸೆ ನೀಡಿದ್ದಾರೆ.

By ETV Bharat Karnataka Team

Published : Apr 4, 2024, 9:40 AM IST

sumalta-ambareesh
ಸುಮಲತಾಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ: ರಾಧಾಮೋಹನ್ ದಾಸ್ ಅಗರ್‌ವಾಲ್

ಬೆಂಗಳೂರು:ಸಂಸದೆ ಸುಮಲತಾ ಅಂಬರೀಶ್​ ಅವರು ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. ಅವರಿಗೆ ನಾವು ಯಾವುದೇ ಆಫರ್ ನೀಡಿಲ್ಲ, ಆದರೆ ಪಕ್ಷದಲ್ಲಿ ಅವರಿಗೆ ಉತ್ತಮ ಭವಿಷ್ಯ ಇದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸುವ ಬದಲು ಬಿಜೆಪಿ ಪಕ್ಷ ಸೇರುವ ನಿರ್ಧಾರ ಮಾಡಿದ್ದಾರೆ. ಅವರು ಐದು ವರ್ಷದಿಂದ ನಮ್ಮ ಪರವೇ ಇದ್ದಾರೆ. ಮೈತ್ರಿ ಕಾರಣಕ್ಕಾಗಿ ಅವರಿಗೆ ಅನಿವಾರ್ಯವಾಗಿ ಟಿಕೆಟ್ ಕೊಡಲಾಗಿಲ್ಲ, ಅವರಿಗೆ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಈಶ್ವರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೀನಿ ಅಂತಿದ್ದರೂ ಕೂಡ ಮೋದಿ ಪರ ಇದ್ದಾರೆ. ಅದರರ್ಥ ಪಕ್ಷದ ಪರ ಅವರಿದ್ದಾರೆ ಎಂದು ಅರ್ಥ. ಅವರು ಪಕ್ಷೇತರ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ವಿಶ್ವಾಸ ಇದೆ. ಈಗ ಕೋಪದಲ್ಲಿ ಈಶ್ವರಪ್ಪ ಮಾತನಾಡ್ತಿದ್ದಾರೆ ಅಷ್ಟೇ, ಅವರು ಸಮಾಧಾನ ಆಗುತ್ತಾರೆ ಎಂದು ಹೇಳಿದರು.

ಹಿಂದುತ್ವ ನಾಯಕರಿಗೆ ಟಿಕೆಟ್ ಕೈತಪ್ಪಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಗರ್​​ವಾಲ್, ನಮ್ಮಲ್ಲಿ ಕಟ್ಟರ್ ಹಿಂದುತ್ವ ನಾಯಕರು ಅಂತ ಇಲ್ಲ. ಹಾಗಂತ ಹಿಂದುತ್ವಕ್ಕೆ ಧಕ್ಕೆ ಬಂದರೆ ಯಾರೂ ಅಸಹಾಯಕರೂ ಆಗಿರಲ್ಲ. ರಾಘವೇಂದ್ರ ಅವರು ಮುಸ್ಲಿಂ ನಾಯಕರಾ? ಅವರು ಹಿಂದೂ ಅಲ್ವಾ? ಕೆಲವರು ಹಿಂದೂ ಧರ್ಮಕ್ಕೆ ಧಕ್ಕೆ ಆದಾಗ ಕಹಿಯಾಗಿ ಪ್ರತಿಕ್ರಿಯೆ ಕೊಡಬಹುದು. ಅಷ್ಟಕ್ಕೇ ಕಟ್ಟರ್ ಹಿಂದುತ್ವ ಅಂದರೆ ಸರಿಯಾಗುತ್ತಾ? ಎಂದರು.

ಮೈತ್ರಿ ಮುಂದೆಯೂ ಮುಂದುವರೆಯುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮದುವೆ ಸಾಮಾಜಿಕ ಆಯಾಮದಲ್ಲಿ ಆಗುತ್ತದೆ, ಒಪ್ಪಂದದ ಮೇರೆಗೆ ಆಗಲ್ಲ. ಹಿಂದೂ ಧರ್ಮದಲ್ಲಿ ಸಾಮಾಜಿಕ ವ್ಯವಸ್ಥೆಯಡಿ ಮದುವೆಯಾಗುವುದರಿಂದ ತಲಾಖ್ ಇರಲ್ಲ. ಮೈತ್ರಿ ಮುಂದುವರೆಯುವ ಬಗ್ಗೆ ನಾನು ನಿರ್ಣಯ ಮಾಡಕ್ಕಾಗಲ್ಲ, 2004ರಲ್ಲಿ ನಾವು ಚುನಾವಣಾ ಮೈತ್ರಿ ಮಾಡಿಕೊಂಡಿರಲಿಲ್ಲ, ಚುನಾವಣೆ ನಂತರ ಮೈತ್ರಿ ಆಗಿತ್ತು. ಹಾಗಾಗಿ, ಆ ಮೈತ್ರಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಿದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಯಾವುದೇ ಷರತ್ತು ಹಾಕಿ ಪಕ್ಷ ಸೇರಿಲ್ಲ. ಅವರಿಗೆ ಟಿಕೆಟ್ ಭರವಸೆಯೂ ಕೊಟ್ಟಿಲ್ಲ, ಅವರ ಮೇಲೆ ಸಿಬಿಐ‌ ಕೇಸ್​​ಗಳ ಸಂಖ್ಯೆ ಕಡಿಮೆ ಆಗಿದೆ. ಈಗ ಕೇವಲ ನಾಲ್ಕು ಕೇಸ್​ಗಳು ಬಾಕಿ ಇದೆ. ಅವರಿಗೆ ಟಿಕೆಟ್ ಕೊಟ್ಟಾಗ ಮಾತ್ರ ಪ್ರಕರಣಗಳ ಪ್ರಶ್ನೆ ಬರುತ್ತದೆ. ಅವರ ಜೊತೆ ನಮ್ಮ ಸಾವಿರಾರು ಕಾರ್ಯಕರ್ತರೂ ಪಕ್ಷ ಬಿಟ್ಟಿದ್ದರು, ಈಗ ಅವರೆಲ್ಲ ವಾಪಸ್​ ಆಗಿದ್ದಾರೆ ಎಂದರು.

ಇದನ್ನೂ ಓದಿ:ಬಿಜೆಪಿ ಸೇರುತ್ತೇನೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಂಸದೆ ಸುಮಲತಾ ಘೋಷಣೆ

ABOUT THE AUTHOR

...view details