ಬೆಂಗಳೂರು:ಸುಧಾ ಮೂರ್ತಿ ಅವರು ಕರ್ನಾಟಕದ ಶಿಗ್ಗಾಂವ್ನ ಡಾ. ಆರ್ ಹೆಚ್ ಕುಲಕರ್ಣಿ ಮತ್ತು ವಿಮಲಾ ದಂಪತಿಯ ಪುತ್ರಿಯಾಗಿ (1950 ಆಗಸ್ಟ್ 19) ಜನಿಸಿದರು. ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಸುಧಾ ಮೂರ್ತಿಯವರು ಬಿ.ವಿ.ಬಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜ್‌ನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದರು. ತರಗತಿಯಲ್ಲಿ ಮೊದಲಿಗರಾಗಿ ಯಶಸ್ವಿ ಸಾಧನೆ ಮಾಡಿದ್ದರಿಂದ ಆಗಿನ ಸಿಎಂ ಕರ್ನಾಟಕದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸ್ ಅವರಿಂದ ಚಿನ್ನದ ಪದಕ ಪಡೆದುಕೊಂಡರು. ನಂತರ ಅವರು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಇ ಪದವಿ ಪಡೆದುಕೊಂಡು ಹೆಮ್ಮೆಯ ಸಾಧನೆ ಮಾಡಿದ್ದರು. ಪ್ರಥಮ ಸ್ಥಾನ ಪಡೆದುಕೊಂಡ ಅವರು ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ (ಐಐಇ) ಯಿಂದ ಬಂಗಾರದ ಪದಕ ಸಹ ಮುಡಿಗೇರಿಸಿಕೊಂಡಿದ್ದರು.
ಸುಧಾ ಮೂರ್ತಿ ಅವರ ವೃತ್ತಿಜೀವನ :ಈಗಿನ ಟಾಟಾ ಮೋಟರ್ಸ್ ಅಥವಾ ಅಂದಿನ ಭಾರತದ ಅತೀ ದೊಡ್ಡ ವಾಹನ ಉತ್ಪಾದಕ ಸಂಸ್ಥೆ ಟೆಲ್ಕೋ (ಟಾಟಾ ಎಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ) ನೇಮಿಸಿಕೊಂಡ ಮೊದಲ ಮಹಿಳಾ ಎಂಜಿನಿಯರ್ ಶ್ರೀಮತಿ ಮೂರ್ತಿ. ಅವರು ಪುಣೆ, ಮುಂಬೈ, ಮತ್ತು ಜೆಮ್‌ಷೆಡ್‌ಪುರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಅವರು ಕಂಪನಿಯಲ್ಲಿ 'ಗಂಡಸರು ಮಾತ್ರ' ಎಂಬ ಲಿಂಗ ಪಕ್ಷಪಾತ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದರು. ಈ ವಿಷಯವನ್ನು ಗಮನಿಸಿದ ಟೆಲ್ಕೋದ ಮುಖ್ಯಸ್ಥರು ಅವರನ್ನು ವಿಶೇಷ ಸಂದರ್ಶನಕ್ಕೆ ಆಹ್ವಾನಿಸಿದ್ದರು.
ಇದನ್ನೂ ಓದಿ: ಶ್ವಾನದ ಕೈಯಲ್ಲಿ ಪುಸ್ತಕ ಬಿಡುಗಡೆ ಮಾಡಿಸಿದ ಇನ್ಫೋಸಿಸ್ ಸುಧಾ ಮೂರ್ತಿ
ನಂತರ ಅವರು ಪುಣೆಯ ವಾಲ್ಚಂದ್ ಗ್ರೂಪ್ ಆಫ್ ಇಂಡಸ್ಟ್ರೀಸ್ನಲ್ಲಿ ಹಿರಿಯ ಸಿಸ್ಟಂ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸಿದರು. 1974 -1981 ರವರೆಗೆ ಪುಣೆಯಲ್ಲಿದ್ದ ಸುಧಾ ಮೂರ್ತಿ ಅವರು ನಂತರ ಮುಂಬೈನಲ್ಲಿ ನೆಲೆಸಿದರು. ಇನ್ಫೋಸಿಸ್‌ನ ಸ್ಥಾಪನೆಯ ಸಮಯದಲ್ಲಿ ಅವರು ತಮ್ಮ ಉಳಿತಾಯದ ರೂ. 10,000 ವನ್ನು ಪತಿಗೆ ನೀಡಿದ್ದರು. ಇನ್ಫೋಸಿಸ್ ಫೌಂಡೇಶನ್ ಅನ್ನು 1996 ರಲ್ಲಿ ಹುಟ್ಟುಹಾಕಿದ ಅವರು ಈಗಲೂ ಅದರ ಟ್ರಸ್ಟಿಯಾಗಿ ಮುಂದುವರೆದಿದ್ದಾರೆ. ಬೋಧನಾ ವೃತ್ತಿಯನ್ನು ಬಹುವಾಗಿ ಇಷ್ಟಪಡುವ ಅವರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮತ್ತು ತರಬೇತಿ ಒದಗಿಸುವ ಆಸಕ್ತಿಯಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಜೊತೆಗೆ ಕ್ರೈಸ್ಟ್ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ವೈಯಕ್ತಿಕ ಜೀವನ : ಪುಣೆಯ ಟೆಲ್ಕೋದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಅವರು ತಮ್ಮ ಬಾಳ ಸಂಗಾತಿ ನಾರಾಯಣ ಮೂರ್ತಿ ಅವರನ್ನು ಭೇಟಿಯಾದರು ಮತ್ತು ನಂತರ ಅವರಿಬ್ಬರು ಮದುವೆಯಾದರು. ಅವರಿಗೆ ಅಕ್ಷತಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ಫೋಸಿಸ್ ಫೌಂಡೇಶನ್‌ಗೆ ಆಧಾರಸ್ತಂಭ ಸುಧಾಮೂರ್ತಿ. ಅವರು ಈಗಲೂ ಕಂಪನಿಯನ್ನು ಬೆಳೆಸಲು ತಮ್ಮ ಪತಿಗೆ ನೆರವಾಗುತ್ತಿದ್ದಾರೆ.
ಸುಧಾ ಮೂರ್ತಿ ಅವರ ಬರಹಗಳು : ಶ್ರೀಮತಿ ಸುಧಾ ಮೂರ್ತಿ ಅವರು ಲೇಖಕಿಯಾಗಿ ಅನೇಕ ಕಥೆಗಳನ್ನು, ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರು ಆತಿಥ್ಯ, ತಮ್ಮ ಬಾಲ್ಯ, ದೇಣಿಗೆ ಮತ್ತು ದಾನದ ಬಗೆಗಿನ ಅಭಿಪ್ರಾಯಗಳನ್ನು ಅರಿತುಕೊಳ್ಳುವುದು ಮೊದಲಾದವುಗಳ ಬಗ್ಗೆ ಬರೆಯುತ್ತಾರೆ. ಅವರ ಅನೇಕ ಪುಸ್ತಕಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. ಕೆಲವು ಟಿವಿ ಸರಣಿಗಳಾಗಿ ರೂಪಾಂತರಗೊಂಡಿವೆ. ಅವರ ಅನೇಕ ಕೃತಿಗಳು ಮಕ್ಕಳ ಸರಣಿಗಳಾಗಿವೆ. ಸುಧಾ ಮೂರ್ತಿಯವರು ಕನ್ನಡ ಮತ್ತು ಇಂಗ್ಲಿಷ್‌ನ ಅನನ್ಯ ಕಾದಂಬರಿ ಬರಹಗಾರ್ತಿ. ಪೆಂಗ್ವಿನ್ ಪ್ರಕಾಶನ ಅವರ ಹೆಚ್ಚಿನ ಬರಹಗಳನ್ನು ಪ್ರಕಟಿಸಿವೆ.