ಕರ್ನಾಟಕ

karnataka

ETV Bharat / state

ಕೋಟೆನಾಡಲ್ಲಿ ಶಕ್ತಿ ಪ್ರದರ್ಶನ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ - Chitradurga Lok Sabha constituency

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ ಎನ್ ಚಂದ್ರಪ್ಪ ಹಾಗೂ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಗೋವಿಂದ ಕಾರಜೋಳ ಅವರು ಇಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಪಕ್ಷಗಳು ಭಾರಿ ಶಕ್ತಿ ಪ್ರದರ್ಶನಕ್ಕೆ ಮುಂದಾದವು.

Submission of nomination papers by Congress and BJP candidates
Submission of nomination papers by Congress and BJP candidates

By ETV Bharat Karnataka Team

Published : Apr 4, 2024, 4:09 PM IST

ಚಿತ್ರದುರ್ಗ:ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳೇ ಪ್ರಮುಖ ಎದುರಾಳಿಗಳಾಗಿದ್ದು, ಗುರುವಾರ (ಇಂದು) ಎರಡೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅಭ್ಯರ್ಥಿಗಳಿಗೆ ಆಯಾ ಪಕ್ಷದ ಮುಖಂಡರುಗಳು ಸಾಥ್​ ನೀಡಿದರು.

ನಾಮಪತ್ರ ಸಲ್ಲಿಕೆ

ಕೈ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಡಿ.ಸುಧಾಕರ್, ಶಾಸಕರಾದ ಎನ್ ವೈ ಗೋಪಾಲಕೃಷ್ಣ, ಬಿ ಜಿ ಗೋವಿಂದಪ್ಪ, ಕೆ ಸಿ ವಿರೇಂದ್ರ, ಟಿ ರಘುಮೂರ್ತಿ, ಮಾಜಿ ಸಚಿವರಾದ ಟಿ ಬಿ ಜಯಚಂದ್ರ, ಹೆಚ್ ಆಂಜನೇಯ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ಬಳಿಕ ಕೆಲ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸೇರಿಸಿಕೊಂಡರು. ಇನ್ನು ಬಿಜೆಪಿ-ಜೆಡಿಎಸ್​​ ಅಭ್ಯರ್ಥಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಮಾಧುಸ್ವಾಮಿ, ಮಾಜಿ ಸಿಎಂ ಸದಾನಂದಗೌಡ ಹಾಜರಿದ್ದು ಸಾಥ್ ನೀಡಿದರು. ಉಭಯ ನಾಯಕರು ಜಿಲ್ಲಾ ಚುನಾವಣಾಧಿಕಾರಿ ಟಿ. ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಆಯಾ ಪಕ್ಷಗಳ ಅಭ್ಯರ್ಥಿಗಳು ರೋಡ್ ಶೋ ನಡೆಸಿ ಮತದಾರರ ಗಮನ ಸೆಳೆದರು.

ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೈ ಅಭ್ಯರ್ಥಿ ಬಿ ಎನ್ ಚಂದ್ರಪ್ಪ, ಅನ್ಯ ಪಕ್ಷದ ಅಭ್ಯರ್ಥಿಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. ನಾವು, ನಮ್ಮ ಪಕ್ಷ, ಜಾತ್ಯತೀತ ತತ್ವ, ಗ್ಯಾರಂಟಿ ಯೋಜನೆ ಭದ್ರವಾಗಿವೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಮಾಜಿ ಉಪ ಮುಖ್ಯಮಂತ್ರಿಯೇ ಆಗಿರಬಹುದು, ಯಾರೇ ಬಂದರೂ ಅವರು ನಮ್ಮ ಎದುರಾಳಿಗಳು. ಹಾಗೆಯೇ ಅವರನ್ನು ಗೌರವಿಸುತ್ತೇವೆ. ಎದುರಾಳಿಗಳ ಬಗ್ಗೆ ಟೀಕಿಸಲ್ಲ, ನಮ್ಮ ಪಕ್ಷ ಸಂಘಟನೆಗೆ ಸಮಯ ಬಳಸುತ್ತೇವೆ. ಚುನಾವಣೆ ಬಳಿಕ ಕೈ ಪಕ್ಷದಲ್ಲಿ ದೀಪ‌ ಹಚ್ಚಲೂ ಜನ ಇರಲ್ಲ ಎಂದಿರುವ ಕಾರಜೋಳ ಅವರು ಭ್ರಮೆಯಲ್ಲಿದ್ದಾರೆ ಎಂದು ಟಾಂಗ್​ ನೀಡಿದರು.

ರಾಜ್ಯದಲ್ಲಿ ಶೇ.76ರಷ್ಟು ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ. ರಾಜ್ಯದಲ್ಲಿ ಚಿತ್ರದುರ್ಗ‌ ಸೇರಿ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ವರ್ಕೌಟ್ ಆಗುತ್ತವೆ. ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಎಲ್ಲ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ಪ್ರತಿಯೊಬ್ಬರ ಬ್ಯಾಂಕ್​ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು, 15 ರೂ. ಕೂಡ ಹಾಕಿಲ್ಲ. ಕಳೆದ 10 ವರ್ಷದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಭದ್ರಾ ಯೋಜನೆಗೆ 5300 ಕೋಟಿ ರೂ. ಕೊಡುವುದಾಗಿ ಹೇಳಿದ್ದರು, ಅದಕ್ಕೂ ಸಹ ಐದು ರೂ.‌ ಕೊಟ್ಟಿಲ್ಲ. ಹಣದ ಮೂಲಕ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು 10 ಸಾವಿರ ರೂ. ಕೊಟ್ಟರೂ ಜನ ಕಾಂಗ್ರೆಸ್ ಪರ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಚೀನಾ ಗೋಡೆಯಂತಿದೆ, ನಾವು ಗೆಲ್ಲುತ್ತೇವೆ ಎಂದು ಉಸ್ತುವಾರಿ ಸಚಿವ ಡಿ.ಸುಧಾಕರ್ ಭವಿಷ್ಯ ನುಡಿದರು.

ನಗರದಲ್ಲಿ ಕಾಂಗ್ರೆಸ್ ಸಮಾವೇಶ ಏರ್ಪಡಿಸಲಾಗಿದ್ದು ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ ಸಚಿವ ಸತೀಶ ಜಾರಕಿಹೊಳಿ, ಚಿತ್ರದುರ್ಗಕ್ಕೆ ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಆನೇಕಲ್​​ನಿಂದ ನಾರಾಯಣಸ್ವಾಮಿ ಬಂದಿದ್ದರು. ದೂರದಿಂದ ಬಂದವರು ಐದು ವರ್ಷ ಸಂಸದರಾಗಿ ಈಗ ವಾಪಸ್ ಆಗಿದ್ದಾರೆ. ಈ‌ ಚುನಾವಣೆಗೆ ಬಿಜೆಪಿ ಇನ್ನೊಬ್ಬರು ಹೊಸಬರನ್ನು ಕರೆ ತಂದಿದೆ. ಹಳಬರು ಗೆಲ್ಲಲ್ಲ ಎಂಬ ಕಾರಣಕ್ಕೆ ನಾರಾಯಣಸ್ವಾಮಿಗೆ ಟಿಕೆಟ್‌ ನೀಡಿಲ್ಲ. ಈಗ ಮುಧೋಳದಿಂದ ಕಾರಜೋಳ ಅವರನ್ನು ಕರೆ ತಂದಿದ್ದಾರೆ. ಈ ಮೂಲಕ ಚಿತ್ರದುರ್ಗವನ್ನು ಬಿಜೆಪಿ ಟೂರಿಂಗ್ ಟಾಕೀಸ್ ಎಂದು ತಿಳಿದಿದೆ. ಬಿಜೆಪಿಯವರು ಮೋದಿ ಹವಾ ಇದೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹವಾ ಇದೆ. ಮೋದಿ ನೋಡಿ ಬಿಜೆಪಿಗೆ‌ ಮತ ಕೊಡುವ ಅಗತ್ಯ ಇಲ್ಲ. ಬಿ ಎನ್ ಚಂದ್ರಪ್ಪಗೆ ಮತ ಕೊಡಿ ಎಂದರು.

ಸಮಾವೇಶದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಜತೆ ಕೆಲ ಹೊತ್ತು ಮಾತುಕತೆ ನಡೆಸಿದರು. ಬಳಿಕ ಪ್ರತಿ ಶಾಸಕರನ್ನು ಕರೆದು ಪಕ್ಕಕ್ಕೆ ಕೂರಿಸಿಕೊಂಡು ಚುನಾವಣೆ ಬಗ್ಗೆ ಮಾಹಿತಿ ಪಡೆದ ಸಿಎಂ, ಅಭ್ಯರ್ಥಿಯ ಗೆಲುವಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಮಂಡ್ಯದಲ್ಲಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ, ಯದುವೀರ್ ಒಡೆಯರ್​ ಸಾಥ್​ - HD Kumaraswamy

ABOUT THE AUTHOR

...view details