ತುಮಕೂರು:ಶಾಲೆಯ ಸಮೀಪದ ದೇವಸ್ಥಾನದಲ್ಲಿ ದೀಪ ಹಚ್ಚುತ್ತಿದ್ದಾಗ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಗೌಡಗೆರೆ ಹೋಬಳಿಯಲ್ಲಿ ನಡೆದಿದೆ. ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದೀಕ್ಷಾ ಮೃತಪಟ್ಟವಳು.
ಶಾಲೆಯಲ್ಲಿ ಮಧ್ಯಾಹ್ನ ಊಟದ ವಿರಾಮದ ವೇಳೆ ಬಾಲಕಿ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ದೇವಸ್ಥಾನದಲ್ಲಿ ದೀಪ ಹಚ್ಚುತ್ತಿದ್ದ ವೇಳೆ ಬಾಲಕಿಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡು, ಮೈಮೇಲೆ ಸುಟ್ಟ ಗಾಯಗಳಾಗಿದ್ದವು. ಮಾರ್ಚ್ 13 ರಂದು ಘಟನೆ ನಡೆದಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಶಿಕ್ಷಕರ ವಿರುದ್ಧ ಪೋಷಕರ ಆಕ್ರೋಶ: ಘಟನೆ ನಡೆದ ಬೆನ್ನಲ್ಲೇ ಊರಿನವರು ಹಾಗೂ ಪೋಷಕರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಾಲಕಿಗೆ ದೇವಸ್ಥಾನಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ? ಮಕ್ಕಳು ಶಾಲೆಗೆ ಹೋದ ಮೇಲೆ ಶಾಲೆ ಬಿಡುವವರೆಗೆ ಶಿಕ್ಷಕರ ಜವಾಬ್ದಾರಿಯಲ್ಲವೇ? ಎಂದು ಜನರು ಪ್ರಶ್ನೆ ಮಾಡಿದ್ದರು.