ಕರ್ನಾಟಕ

karnataka

ETV Bharat / state

ಉದಯಗಿರಿ ಕಲ್ಲು ತೂರಾಟ ಪ್ರಕರಣ: ಹಲವರನ್ನು ವಶಕ್ಕೆ ಪಡೆದ ಪೊಲೀಸರು - UDAYAGIRI CASE

ಉದಯಗಿರಿ ಪೊಲೀಸ್ ಠಾಣೆ ಬಳಿ ಕಲ್ಲು ತೂರಾಟ ಪ್ರಕರಣ ಕುರಿತಂತೆ ಅಂಗಡಿಗಳ ಸಿಸಿಟಿವಿ ಕ್ಯಾಮೆರಾ ದೃಶ್ಯ, ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋಗಳ ಆಧಾರದಲ್ಲಿ ಪೊಲೀಸರು ಈಗಾಗಲೇ ಹಲವರನ್ನು ವಶಕ್ಕೆ ಪಡೆದಿದ್ದಾರೆ.

Police team involved in the investigation
ತನಿಖೆಯಲ್ಲಿ ತೊಡಗಿರುವ ಪೊಲೀಸ್​ ತಂಡ (ETV Bharat)

By ETV Bharat Karnataka Team

Published : Feb 12, 2025, 3:46 PM IST

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟರ್‌ ಹಾಕಿದ್ದ ಘಟನೆಯಿಂದ ಉದ್ವಿಗ್ನಗೊಂಡಿದ್ದ ಮೈಸೂರಿನ ಉದಯಗಿರಿ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದ್ದು, ಪೊಲೀಸರು ಠಾಣೆ ಮೇಲೆ ಕಲ್ಲು ತೂರಿದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿರುವುದನ್ನು ವಿರೋಧಿಸಿ ಜನರು ಉದಯಗಿರಿ ಪೊಲೀಸ್​ ಠಾಣೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದ್ದರು. ಬಂಧಿಸಲಾಗಿದ್ದ ಪೋಸ್ಟ್​ ಮಾಡಿದ ವ್ಯಕ್ತಿಯನ್ನು ಬಿಟ್ಟುಬಿಡುತ್ತಾರೆ ಎನ್ನುವ ತಪ್ಪು ಕಲ್ಪನೆಯಿಂದ, ಪೊಲೀಸ್​ ಠಾಣೆಯಲ್ಲಿ ಗದ್ದಲ ಉಂಟಾಗಿತ್ತು. ಈ ವೇಳೆ ಕೆಲವರು ಠಾಣೆ ಹಾಗೂ ಪೊಲೀಸ್​ ವಾಹನಗಳ ಮೇಲೆ ಕಲ್ಲುಗಳನ್ನು ತೂರಿದ್ದರು. ಲಘು ಲಾಠಿ ಚಾರ್ಜ್​ ಹಾಗೂ ಅಶ್ರುವಾಯು ಸಿಡಿಸುವ ಮೂಲಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್​ ಇಲಾಖೆ, ಕಲ್ಲೆಸೆದವರ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿತ್ತು. ಈ ತಂಡಗಳು ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾದ ಘಟನೆಯ ದೃಶ್ಯಗಳನ್ನು ಪರಿಶೀಲಿಸಿ, ಅದರ ಆಧಾರದಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾತ್ತಿವೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಈ ಘಟನೆ ನಡೆದ ದಿನ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಆತನ ಪ್ರಚೋದನಾತ್ಮಕ ಭಾಷಣದ ನಂತರ ಠಾಣೆಯ ಬಳಿ ಜನ ಸೇರಿ ಘಟನೆಗೆ ಕಾರಣವಾಗಿದ್ದು, ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ. ಯಾವುದೇ ರೀತಿಯ ವದಂತಿಗಳಿಗೆ ಜನರು ಕಿವಿಗೊಡಬಾರದು. ಶಾಂತಿ ಕಾಪಾಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಡಿಸಿಪಿ ವಾಹನ ಸೇರಿ 10ಕ್ಕೂ ಹೆಚ್ಚು ಪೊಲೀಸ್‌ ವಾಹನಗಳು ಜಖಂ: "ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಮೈಸೂರು ನಗರದ ಸಂಚಾರಿ ಹಾಗೂ ಅಪರಾಧ ವಿಭಾಗದ ಡಿಸಿಪಿ ಎಸ್.‌ಜಾಹ್ನವಿ ಅವರ ಕಾರು ಸೇರಿದಂತೆ, ಇತರ ಹತ್ತಕ್ಕೂ ಹೆಚ್ಚು ಪೊಲೀಸ್‌ ವಾಹನಗಳು ಜಖಂ ಆಗಿವೆ. ತನಿಖಾ ತಂಡಗಳು ಅವುಗಳ ಪರಿಶೀಲನೆ ನಡೆಸುತ್ತಿದ್ದು, ಘಟನೆಯ ದಿನ ಅಷ್ಟೊಂದು ಕಲ್ಲುಗಳು ಎಲ್ಲಿಂದ ಬಂದವು? ಇದೊಂದು ಪೂರ್ವ ನಿಯೋಜಿತ ಕೃತ್ಯವೇ? ಎಂಬ ವಿಚಾರದಲ್ಲೂ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 14ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಡಿಸಿಪಿ ಮುತ್ತುರಾಜ್‌ ಮಾಹಿತಿ ನೀಡಿದರು.

ಇದನ್ನೂ ಓದಿ:ಅವಹೇಳನಕಾರಿ ಪೋಸ್ಟರ್​ನಿಂದ ಉದ್ವಿಗ್ನಗೊಂಡಿದ್ದ ಉದಯಗಿರಿ ಪರಿಸ್ಥಿತಿ ಶಾಂತ; ಎಡಿಜಿಪಿ

ABOUT THE AUTHOR

...view details