ಬೆಂಗಳೂರು: ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಫೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ (ಬೆಂಗಳೂರು ಬಿಸಿನೆಸ್ ಕಾರಿಡಾರ್) ಶೀಘ್ರದಲ್ಲೇ ಚಾಲನೆ ಸಿಗುವ ಸಾಧ್ಯತೆ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ದೇಶಿತ ಬಿಬಿಸಿ ನಿರ್ಮಾಣದ ಯೋಜನೆಗೆ ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್ (ಹುಡ್ಕೊ) ಅಂದಾಜು 27 ಸಾವಿರ ಕೋಟಿ ರೂ. ಸಾಲ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಬಿಡಿಎ ಹಾಗೂ ಹುಡ್ಕೊ ಒಡಂಬಡಿಕೆ ಮಾಡಿಕೊಳ್ಳಲಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಫೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಬಿಡಿಎ 2005 ಸೆಪ್ಟೆಂಬರ್ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆದರೆ, ಸುಮಾರು 67 ಗ್ರಾಮಗಳಿಗೆ ವ್ಯಾಪಿಸಿರುವ 1,810 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದು 2007 ರಲ್ಲಿ. ಹಾಗಾಗಿ, ಅಲ್ಲಿಂದ ಭೂಸ್ವಾಧೀನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಇದೀಗ ಈ ಯೋಜನೆಗೆ ಇದೇ ತಿಂಗಳ ಅಂತ್ಯ ಅಥವಾ ಫೆಬ್ರವರಿಯಲ್ಲಿ ಚಾಲನೆ ಸಿಗಲಿದೆ.
ಟೆಂಡರ್ ಆಹ್ವಾನಿಸಿದರೂ ಯಾರೂ ಬಿಡ್ ಸಲ್ಲಿಸಿಲ್ಲ:ಪಿಆರ್‌ಆರ್ ನಿರ್ಮಾಣಕ್ಕಾಗಿ ಮೂರ್ನಾಲ್ಕು ಬಾರಿ ಟೆಂಡರ್ ಆಹ್ವಾನಿಸಿದರೂ ಯಾರೂ ಬಿಡ್ ಸಲ್ಲಿಸಿರಲಿಲ್ಲ. ಜೊತೆಗೆ ಜಮೀನು ಕಳೆದುಕೊಳ್ಳುವ ಭೂ ಮಾಲೀಕರಿಗೆ ಪರಿಹಾರ ನಿಗದಿ ಮಾಡುವ ವಿಚಾರದಲ್ಲೂ ಗೊಂದಲಗಳು ಏರ್ಪಟ್ಟಿದ್ದವು. ಬಿಡಿಎ ಕಾಯಿದೆ ಹಾಗೂ ಭೂಸ್ವಾಧೀನ ಪರಿಹಾರ ಕಾಯಿದೆ ಅನ್ವಯ ಭೂಮಿ ಬಿಟ್ಟುಕೊಟ್ಟ ರೈತರಿಗೆ ಪರಿಹಾರ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ನ್ಯಾಯಾಲಯ ಕೂಡ ಅನುಮತಿ ನೀಡಿರುವುದರಿಂದ ಈ ಯೋಜನೆಗೆ ವೇಗ ಸಿಕ್ಕಿದೆ.
ಅಗತ್ಯ ಇರುವುದು 2560 ಎಕರೆ:ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ 2,560 ಎಕರೆಯಷ್ಟು ಭೂಮಿ ಅವಶ್ಯಕತೆ ಇದೆ. ರಸ್ತೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 1,800 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಎರಡನೇ ಹಂತದಲ್ಲಿ 2022 ರಲ್ಲಿ 600 ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈಗ 1,800 ಎಕರೆ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಸಂಬಂಧ ಭೂ ಮಾಲೀಕರೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ನಿಗದಿಪಡಿಸಲಾಗುವುದು ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರದ ಸುತ್ತ ಅರ್ಧ ವೃತ್ತಾಕಾರದಲ್ಲಿ ಪಿಆರ್‌ಆರ್ ನಿರ್ಮಿಸಲು 2007 ರಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು. ಭೂ ಸ್ವಾಧೀನ ಪ್ರಕ್ರಿಯೆ, ಭೂ ಪರಿಹಾರ ಬಿಕ್ಕಟ್ಟು, ಪರಿಸರ ಇಲಾಖೆ ಅನುಮತಿ ವಿಳಂಬ, ಬಿಡ್ ಸಲ್ಲಿಸಲು ಗುತ್ತಿಗೆದಾರರ ನಿರಾಸಕ್ತಿ ಮತ್ತಿತರ ಕಾರಣದಿಂದ ಈ ಯೋಜನೆ ಪ್ರಗತಿ ಸಾಧಿಸಿರಲಿಲ್ಲ.
ಯೋಜನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ;ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ನಂತರ ಈ ಯೋಜನೆಗೆ ಚಾಲನೆ ಸಿಕ್ಕಿದೆ. ಬಿಡ್ದಾರರು ಬರದಿರುವ ಕಾರಣ ಯೋಜನೆಯನ್ನೇ ಮೂರು ಭಾಗಗಳನ್ನಾಗಿ ವಿಭಜಿಸಲು ಸೂಚಿಸಿದ್ದರು. ಬಳಿಕ ಬಿಡಿಎಯಿಂದಲೇ ಯೋಜನೆ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಸಚಿವರು ತಿಳಿಸಿದ್ದರು. ಈ ಹಿನ್ನೆಲೆ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು. ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ಕೆಲ ತಿಂಗಳಲ್ಲೇ ರೈತರು ಹಾಗೂ ಭೂಮಾಲೀಕರದೊಂದಿಗೆ ಮಾತುಕತೆ ನಡೆಸಿದ್ದರು.