ಬೆಂಗಳೂರು:ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಹಿಂದುಳಿದ 294 ಜಾತಿ ಸಮಾವೇಶ ಮಾಡುವ ಬಗ್ಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮಾರ್ಚ್ 9ರಿಂದ ರಾಜ್ಯಾದ್ಯಂತ ಸಮಾವೇಶಗಳನ್ನು ಆಯೋಜಿಸುವ ನಿರ್ಧಾರವನ್ನು ಬಿಜೆಪಿ ಕೈಗೊಂಡಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಭೆ ನಡೆಯಿತು. ಲೋಕಸಭಾ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮತ್ತು ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಓಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ''ರಾಜ್ಯ ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯಮಟ್ಟದ ಜಿಲ್ಲಾ ಪದಾಧಿಕಾರಿಗಳು, ಲೋಕಸಭಾ ಚುನಾವಣಾ ಉಸ್ತುವಾರಿಗಳ ಸಭೆ ನಡೆದಿದೆ. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಹಿಂದುಳಿದ 294 ಜಾತಿಗಳ ಸಮಾವೇಶ ಮಾಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಮಾರ್ಚ್ 9ರಿಂದ ರಾಜ್ಯಾದ್ಯಂತ ಸಮಾವೇಶ ನಡೆಯಲಿದೆ. ಹಿಂದುಳಿದ ಸಮುದಾಯದವರಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಬದುಕು ಕಟ್ಟಿಕೊಡುವ ಕೆಲಸ ಮಾಡಲಿದೆ'' ಎಂದರು.
''ಬೂತ್, ವಾರ್ಡ್ ಹಾಗೂ ಶಕ್ತಿವಾರು ಮಟ್ಟದಲ್ಲಿ ಎಲ್ಲಾ ಸಮುದಾಯಗಳನ್ನು ನೇರವಾಗಿ ಸಂಪರ್ಕ ಮಾಡಲಾಗುತ್ತದೆ. ಸ್ವಾಭಿಮಾನಿ ಭಾರತದ ಕಲ್ಪನೆ, ಮೇಕ್ ಇನ್ ಇಂಡಿಯಾ ಹಾಗೂ ವಿಶ್ವಕರ್ಮ ಯೋಜನೆ ಎಲ್ಲವೂ ಬದುಕುಗೆ ನೆರವಾಗುವ ಯೋಜನೆಗಳಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ, ಈ ಬಾರಿ ಹಿಂದುಳಿದ ಸಮುದಾಯಗಳು ಮೋದಿ ಅವರನ್ನು ಬೆಂಬಲಿಸಲಿವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.