ಕರ್ನಾಟಕ

karnataka

ETV Bharat / state

ರಾಜ್ಯದ 'ಪ್ರಗತಿಯ ಮರುಕಲ್ಪನೆ' ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಇಂದು ಚಾಲನೆ: ರಕ್ಷಣಾ ಸಚಿವರಿಂದ ಉದ್ಘಾಟನೆ - INVEST KARNATAKA 2025

ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಚಾಲನೆ ನೀಡಲಿದ್ದಾರೆ.

DCM DK Shivakumar and Minister MB Patil reviewed the preparations.
ಸಿದ್ಧತೆ ಪರಿಶೀಲಿಸಿದ ಡಿಸಿಎಂ ಡಿ ಕೆ ಶಿವಕುಮಾರ್​ ಹಾಗೂ ಸಚಿವ ಎಂ ಬಿ ಪಾಟೀಲ್​ (ETV Bharat)

By ETV Bharat Karnataka Team

Published : Feb 11, 2025, 12:33 PM IST

ಬೆಂಗಳೂರು: ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌, ನವೋದ್ಯಮ, ಏರೊಸ್ಪೇಸ್‌ ಆ್ಯಂಡ್‌ ಡಿಫೆನ್ಸ್‌ ಮತ್ತಿತರ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ಪ್ರಖ್ಯಾತಿಯ ಛಾಪು ಮೂಡಿಸಿರುವ ಕರ್ನಾಟಕವು, 'ಪ್ರಗತಿಯ ಮರುಕಲ್ಪನೆ' ಧ್ಯೇಯದ ಇನ್ವೆಸ್ಟ್‌ ಕರ್ನಾಟಕ 2025ರ ಮೂಲಕ ವಿಶ್ವದ ಹೂಡಿಕೆದಾರರನ್ನು ರಾಜ್ಯದತ್ತ ಸೆಳೆಯಲು ಸಜ್ಜಾಗಿದೆ.

ಇಂದಿನಿಂದ ಫೆ.14ರ ವರೆಗೆ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲಿರುವ ಉದ್ದಿಮೆ ದಿಗ್ಗಜರು, ಹೂಡಿಕೆದಾರರು, ನವೋದ್ಯಮಗಳ ಕನಸುಗಾರರು, ನೀತಿ ನಿರೂಪಣೆಯ ಚಿಂತಕರಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಕೆಂಪುರತ್ನಗಂಬಳಿಯ ಸ್ವಾಗತ ಕೋರುವ ಸಿದ್ಧತೆಗಳೆಲ್ಲ ಪೂರ್ಣಗೊಂಡಿವೆ.

"ಇಂದು ಸಂಜೆ 4 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್‌ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ" ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು.

"ಕೆಲವು ಕೇಂದ್ರ ಸಚಿವರು ನಾಲ್ಕು ದಿನಗಳಲ್ಲಿ ಯಾವುದಾದರೊಂದು ದಿನ ಭಾಗವಹಿಸುವ ಭರವಸೆ ನೀಡಿದ್ದಾರೆ. ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ಬುಧವಾರದಿಂದ ಶುಕ್ರವಾರದವರೆಗೆ ನಡೆಯಲಿರುವ ವಿವಿಧ ವಿಚಾರಗೋಷ್ಠಿಗಳಲ್ಲಿ ವಿವಿಧ ಕ್ಷೇತ್ರಗಳ ದಿಗ್ಗಜರು ಉದ್ದಿಮೆ ಲೋಕದ ಭವಿಷ್ಯದ ಬಗೆಗಿನ ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರಮುಖ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗುವುದು" ಎಂದು ವಿವರಿಸಿದರು.

"ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಇನ್ವೆಸ್ಟ್‌ ಕರ್ನಾಟಕ ಪ್ರಶಸ್ತಿ, ಎಸ್‌ಎಂಇ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ʼಎಸ್‌ಎಂಇ ಕನೆಕ್ಟ್‌- 25ʼ, ವೆಂಚುರೈಸ್‌ನ ಎರಡನೆ ಆವೃತ್ತಿ ಇತರ ವಿಶೇಷತೆಗಳಾಗಿವೆ. 60ಕ್ಕೂ ಹೆಚ್ಚು ಕಂಪನಿಗಳು ಮತ್ತು ನವೋದ್ಯಮಗಳು ತಯಾರಿಕೆ, ಸಂಚಾರ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುವ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ವಿನ್‌ ಸಿಟಿ-ನಲ್ಲಿ ಸಹಭಾಗಿತ್ವ ವಿಸ್ತರಿಸಲು ಆದ್ಯತೆ ನೀಡಲಾಗುವುದು" ಎಂದು ಹೇಳಿದರು.

"ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಪ್ರಮುಖ ತಾಣವನ್ನಾಗಿ ಇಡೀ ವಿಶ್ವಕ್ಕೆ ಪ್ರದರ್ಶಿಸಲು, ಪಾಲುದಾರಿಕೆ ಉತ್ತೇಜಿಸಲು ಮತ್ತು ವಿವಿಧ ಕೈಗಾರಿಕಾ ವಲಯಗಳಲ್ಲಿ ನಾವೀನ್ಯತೆಗೆ ಚಾಲನೆ ನೀಡುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಇದು ಬಂಡವಾಳ ಹೂಡಿಕೆಗೆ ವೇದಿಕೆಯಾಗಿರುವುದರ ಜೊತೆಗೆ, ಸರ್ಕಾರ ಮತ್ತು ಉದ್ಯಮ ವಲಯದ ನಡುವಣ ಅರ್ಥಪೂರ್ಣ ಸಹಯೋಗ ಬೆಸೆಯುವುದಕ್ಕೂ ನೆರವಾಗಲಿದೆ. ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಮತ್ತೊಮ್ಮೆ ಮನದಟ್ಟು ಮಾಡಿಕೊಡಲಿದೆ" ಎಂದರು.

"75ಕ್ಕೂ ಹೆಚ್ಚು ಗಣ್ಯ ಭಾಷಣಕಾರರು ಭಾಗವಹಿಸಲಿದ್ದಾರೆ. 25ಕ್ಕೂ ಹೆಚ್ಚು ತಾಂತ್ರಿಕ ಅಧಿವೇಶನಗಳು, 10ಕ್ಕೂ ಹೆಚ್ಚು ದೇಶಗಳ ಜೊತೆಗಿನ ಸಭೆ ಮತ್ತು ಎಸ್‌ಎಂಇ ಕನೆಕ್ಟ್‌ಗೆ ಸಂಬಂಧಿಸಿದ ಸಮಾಲೋಚನೆಗಳಿಗೆ ಈ ಹೂಡಿಕೆ ಶೃಂಗಸಭೆಯು ಸಾಕ್ಷಿಯಾಗಲಿದೆ. ರಾಜ್ಯಕ್ಕೆ ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲು ಅಗತ್ಯವಾದ ಭೂಮಿಕೆಯನ್ನು ರಾಜ್ಯ ಸರ್ಕಾರವು ಹದಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹತ್ತಾರು ಪ್ರಥಮಗಳನ್ನು ತನ್ನ ಮುಡಿಗೆ ಏರಿಸಿಕೊಂಡಿರುವ ಕರ್ನಾಟಕವು, ಈ ಸಮಾವೇಶದ ನೆರವಿನಿಂದ ತನ್ನ ಕೈಗಾರಿಕಾ ಪ್ರಗತಿಯ ವೇಗ ಹೆಚ್ಚಿಸಲು ದೃಢ ನಿರ್ಧಾರ ಮಾಡಿದೆ" ಎಂದು ವಿವರಿಸಿದರು.

ಫೆಬ್ರುವರಿ 12 ರಿಂದ 14ರ ವರೆಗೆ ಸಮಾವೇಶ ಸ್ಥಳದಲ್ಲಿ ವಿವಿಧ ವಿಚಾರಗೋಷ್ಠಿಗಳು, ಸಂವಾದ, ಸಮೂಹ ಚರ್ಚೆಗಳೂ ನಡೆಯಲಿವೆ.

ಫೆ. 12:

1. ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ : ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ.

2. ಕ್ಷಮತೆಯ ಮಾರ್ಗೋಪಾಯಗಳು : ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ.

3. ಭವಿಷ್ಯಕ್ಕೆ ನಾವೀನ್ಯತೆ.

4. ಮುಂದಾಳತ್ವ : ಭಾರತದ ಭವಿಷ್ಯ ರೂಪಿಸುತ್ತಿರುವ ಯುವ ನಾವೀನ್ಯಕಾರರು- ಸಂವಾದಗಳಲ್ಲಿ ಪರಿಣತರು ತಮ್ಮ ಚಿಂತನೆಗಳನ್ನು ಮಂಡಿಸಲಿದ್ದಾರೆ.

ಫೆ. 13:

1. ಕೃತಕ ಬುದ್ಧಿಮತ್ತೆ ಸೀಮಾರೇಖೆ: ದೈತ್ಯ ಜಿಗಿತದಿಂದ ನೈಜ-ಪ್ರಪಂಚದ ಪ್ರಭಾವಗಳವರೆಗೆ- ಸಂವಾದ.

2. ವೈವಿಧ್ಯಮಯ ಪಥಗಳಿಂದ ಸಾಮಾನ್ಯ ಗುರಿಯವರೆಗೆ- ಸಮೂಹ ಚರ್ಚೆ.

ಫೆ. 14 :

ಪ್ರಕ್ಷುಬ್ಧತೆಯಲ್ಲಿ ಅಭಿವೃದ್ಧಿ ಸಾಧಿಸುವುದು: ಶಾಶ್ವತ ಕ್ಷಮತೆ ನಿರ್ಮಿಸುವುದರ ಸವಾಲುಗಳು ಕುರಿತು ಆಡಳಿತ ಪರಿಣತರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಇನ್ವೆಸ್ಟ್‌ ಕರ್ನಾಟಕ ಸಮಾವೇಶದಲ್ಲಿ 19 ದೇಶಗಳು ಭಾಗಿ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್

ABOUT THE AUTHOR

...view details